ಜಿಲ್ಲೆ

ಅರೇಬಿಕಾ ಕಾಫಿಗೆ ಕೀಟಬಾಧೆ

ಪ್ರಸಿನ್ ಕೆ.ಆರ್

ಹಿರಿಕರ ರವಿ ಸೋಮವಾರಪೇಟೆ

ಹಿಂಗಾರು ವಿಳಂಬ ಹಾಗೂ ತಾಲೂಕಿನೆಲ್ಲೆಡೆ ಬಿಸಿಲಿನ ಧಗೆ ಹೆಚ್ಚಾದಂತೆ ಅರೇಬಿಕಾ ಕಾಫಿ ಗಿಡಗಳು ಬಿಳಿಕಾಂಡಕೊರಕ(ಕ್ಸೈಲೋಟ್ರೀಕಸ್‌ಕ್ವಾಡ್ರಿಪಸ್) ರೋಗಬಾಧೆಗೆ ತುತ್ತಾಗಿ ಒಣಗುತ್ತಿದ್ದು, ಬೆಳೆಗಾರರು ಆತಂಕಗೊಂಡಿದ್ದಾರೆ.

ಕಳೆದ ವರ್ಷ ಫೆಬ್ರವರಿ ಕೊನೆಯ ವಾರದಲ್ಲಿ ಉತ್ತಮವಾಗಿ ಹೂಮಳೆ ಸುರಿದಿತ್ತು. ಪ್ರಸಕ್ತ ವರ್ಷ ಏಪ್ರಿಲ್‌ನಲ್ಲಿ ಅಲ್ಲಲಿ ಮಳೆ ಸುರಿದಿದೆ. ವಾರ್ಷಿಕವಾಗಿ ಏಪ್ರಿಲ್‌ನಲ್ಲಿ ರೋಗಪೀಡಿತ ಕಾಫಿ ಗಿಡಗಳ ಎಲೆಗಳು ಕಂದು ಬಣ್ಣಕ್ಕೆ ತಿರುಗುವುದು ವಾಡಿಕೆ ಆಗಿರುವುದರಿಂದ, ಬೆಳೆಗಾರರನ್ನು ರೋಗಪೀಡಿತ ಗಿಡಗಳನ್ನು ಹುಡುಕಿ ಕೀಳುತ್ತಿದ್ದಾರೆ.

ರೋಗಪೀಡಿತ ಕಾಫಿ ಗಿಡಗಳನ್ನು ತೋಟದ ಸಮೀಪದಲ್ಲಿ ಸಂಗ್ರಹಣೆ ಮಾಡಬಾರದು. ಆದರೆ, ಈ ಕ್ರಮದಿಂದ ರೋಗಬಾಧೆ ಹೆಚ್ಚಾಗುವ ಆತಂಕವೂ ಎದುರಾಗಿದೆ. ಕಾಂಡಗಳಲ್ಲಿರುವ ಕೀಟಗಳು ಹಾರಿ, ಇನ್ನೊಂದು ಆರೋಗ್ಯವಂತ ಬುಡಕ್ಕೆ ಸೇರುವುದರಿಂದ ಬೆಳೆಗಾರರು ಎಚ್ಚರ ವಹಿಸಬೇಕಾಗಿದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಳಿಕಾಂಡಕೊರಕಗಳು ಕಾಫಿ ಗಿಡದ ಕಾಂಡವನ್ನು ಕೊರೆದು ತಿನ್ನುತ್ತಿರುವುದರಿಂದ, ಫಸಲು ಕೊಡುತ್ತಿದ್ದ ಗಿಡಗಳು ಸಾಯುತ್ತಿವೆ. ಹತ್ತು ವರ್ಷಗಳ ಹಳೆಯದಾದ ಗಿಡಗಳು ಸಾಯುತ್ತಿರುವುದರಿಂದ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸಬೇಕಾಗಿದೆ.

ಹೊಸದಾಗಿ ಕಾಫಿ ಗಿಡ ನೆಟ್ಟು ಫಸಲು ತೆಗೆಯಬೇಕಾದರೆ ನಾಲ್ಕರಿಂದ 5 ವರ್ಷಗಳು ಬೇಕಾಗುತ್ತದೆ. ಕೊಡಗು ಜಿಲ್ಲೆಯ ಮಟ್ಟಿಗೆ ಅತಿಹೆಚ್ಚು ಅರೇಬಿಕಾ ಕಾಫಿ ಬೆಳೆಯುವ ಸೋಮವಾರಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷ 50 ಕೆ.ಜಿ. ತೂಕದ ಅರೇಬಿಕಾ ಪಾರ್ಚ್‌ಮೆಂಟ್‌ಗೆ 28,500 ರೂ. ಹಾಗೂ ಅರೇಬಿಕಾ ಚೆರ‌್ರಿಗೆ 15,600 ರೂ. ದರ ಇದೆ. ರೋಬಸ್ಟಾ ಪಾರ್ಚ್‌ಮೆಂಟ್ ಗೆ 23,000 ರೂ. ಹಾಗೂ ಚೆರ‌್ರಿಗೆ 12,000 ರೂ. ದರ ಇದೆ. ಫಸಲು ನೀಡುವ ಕಾಫಿ ಗಿಡಗಳನ್ನು ಕಳೆದುಕೊಂಡರೆ ಬೆಳೆಗಾರ ನಷ್ಟ ಅನುಭವಿಸಬೇಕಾಗುತ್ತದೆ.

ಎಕರೆಯೊಂದರಲ್ಲಿ 600 ರಿಂದ 700 ಕಾಫಿ ಗಿಡಗಳು ಇದ್ದರೆ, ಅದರಲ್ಲಿ ಫಸಲು ಕೊಡುವ 20 ರಿಂದ 30 ಗಿಡಗಳು ಕಾಂಡಕೊರಕ ಕೀಟಬಾಧೆಗೆ ತುತ್ತಾಗಿವೆ.

ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ, ಶಾಂತಳ್ಳಿ, ಸುಂಠಿಕೊಪ್ಪ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕಾಫಿ ತೋಟದಲ್ಲಿ ಕಾಂಡಕೊರಕ ಕೀಟಬಾಧೆ ಹೆಚ್ಚಾಗಿದೆ.

ಕೊಡಗು ಜಿಲ್ಲೆಯಲ್ಲಿ 1,02,525 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, 74,495 ಹೆಕ್ಟೇರ್‌ನಲ್ಲಿ ರೋಬಸ್ಟಾ, 28,030 ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 28,540 ಹೆ.ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಅರೇಬಿಕಾ ಕಾಫಿ ಬೆಳೆಯಲು ಸೂಕ್ತ ಪ್ರದೇಶವಾಗಿರುವುದರಿಂದ 22,940 ಹೆ.ನಲ್ಲಿ ಅರೇಬಿಕಾ, 5,600 ಹೆ.ನಲ್ಲಿ ರೋಬಾಸ್ಟಾ ಬೆಳೆಯಲಾಗುತ್ತಿದೆ.

ಕೀಟ ನಿಯಂತ್ರಣ ಕ್ರಮಗಳು: ಪ್ರತಿವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕೀಟಪೀಡಿತ ಗಿಡಗಳನ್ನು ತೆಗೆಯಬೇಕು, ಕಾಂಡಕ್ಕೆ ಕ್ರಿಮಿನಾಶಕ ಸಿಂಪಡಿಸಬೇಕು, ಜುಲೈನಿಂದ, ಸೆಪ್ಟೆಂಬರ್ ಒಳಗೆ ತೋಟದಲ್ಲಿ ಹದವಾದ ನೆರಳು ನಿರ್ವಹಣೆ ಮಾಡಿಕೊಳ್ಳಬೇಕು. ನಂತರ ಅಕ್ಟೋಬರ್‌ನಿಂದ ಡಿಸೆಂಬರ್‌ತನಕ ಕೀಟ ನಿಯಂತ್ರಣದ ಕೆಲಸ ಪುನರಾವರ್ತನೆ ಮಾಡಬೇಕು. ಈ ಕೆಲಸವನ್ನು ಎಲ್ಲ ಬೆಳೆಗಾರರು ಸಾಮೂಹಿಕವಾಗಿ ನಿಗದಿತ ಸಮಯದಲ್ಲಿ ಮಾಡಿದರೆ ರೋಗಬಾಧೆ ಹತೋಟಿ ಸಾಧ್ಯ. ರಾಸಾಯನಿಕದ ಬಳಕೆಯ ಉತ್ತಮ ಫಲಿತಾಂಶ ದೊರಕಬೇಕಾದರೆ, ಅದರ ಬಳಕೆಯನ್ನು ಕೀಟವು ಪ್ರಮುಖವಾಗಿ ಹಾರುವ ಕಾಲದಲ್ಲಿ ಬಳಸಬೇಕು ಎಂಬುದು ಕೀಟತಜ್ಞರ ಸಲಹೆ.