ಜಿಲ್ಲೆ

ವಾಡಿ: ಹತ್ತಿಗೆ ಕೀಟನಾಶಕ ಸಿಂಪಡನೆ, ನಾಲ್ವರು ರೈತರು ತೀವ್ರ ಅಸ್ವಸ್ಥ

ವಾಡಿ: ರಕಸ್ಪೇಟ ಗ್ರಾಮದಲ್ಲಿ ಹತ್ತಿ ಬೆಳೆಗೆ ಕೀಟನಾಶಕ ಸಿಂಪಡಿಸುವ ವೇಳೆ ಅಸ್ವಸ್ಥಗೊಂಡು 5 ದಿನದ ನಂತರ ಪ್ರಾಣ ತೆತ್ತ ಘಟನೆ ಮಾಸುವ ಮುನ್ನವೇ ಹಲಕರ್ಟಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ಕು ಜನರಿಗೆ ಕೀಟನಾಶಕ ಮೈಗೆ ತಗುಲಿದ ಕಾರಣ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ಶನಿವಾರ ವರದಿಯಾಗಿದೆ.

ಹಲಕರ್ಟಿ ಗ್ರಾಪಂ ವ್ಯಾಪ್ತಿಯ ಆರ್. ಬಿ ನಗರ ತಾಂಡಾದಲ್ಲಿ ಶುಕ್ರವಾರ ಘಟನೆ ಜರುಗಿದೆ. ಸುನೀಲ ಜಾಧವ(34), ಅನಿಲ ಜಾಧವ(22), ಕುಮಾರ ಪಾಪಣ್ಣ(30) ಹಾಗೂ ಖೇಮು ರಾಠೋಡ(32) ಎಂಬ ರೈತರು ತೀವ್ರ ಅಸ್ವಸ್ಥಗೊಂಡು ಕಲ್ಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸದ್ಯ ಪರಿಸ್ಥಿತಿ ಚಿಂತಾಜನಕವಾಗಿದೆ.

ನಾಲ್ಕು ಜನ ರೈತರು ಒಟ್ಟಾಗಿ ಹತ್ತಿ ಬೆಳೆಗೆ ತಗುಲಿದ ರೋಗ ನಿಯಂತ್ರಣಕ್ಕೆ ಗುರುವಾರ ಬೆಳಿಗ್ಗೆ ಮೋನೋಕ್ರೋಟ್ ಪಾಸ್ ಹಾಗೂ ಲಾನ್ಸರ್ ಗೋಲ್ಡ್ ಎಂಬ ಹೆಸರಿನ ಕೀಟನಾಶಕ ತೆಗೆದುಕೊಂಡು ಬೆಳೆಗೆ ಸಿಂಪಡಿಸಿ ನಂತರ ಮನೆಗೆ ಮರಳಿದ್ದಾರೆ. ಸಂಜೆ ಸಣ್ಣದಾಗಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ತಲೆಸುತ್ತು, ವಾಂತಿಭೇದಿ ಕಾಣಿಸಿಕೊಂಡಿದೆ. ಸ್ಥಳೀಯವಾಗಿ ಆಸ್ಪತ್ರೆಗೆ ತೋರಿಸಿ ಮರುದಿನ ಕಲ್ಬುರ್ಗಿಗೆ ಹೋಗುವ ಯೋಚನೆ ಮಾಡಿದ್ದೇ ಸಮಸ್ಯೆಗೆ ಮೂಲ ಕಾರಣವಾಗಿದೆ.

ಶುಕ್ರವಾರ ಬೆಳಿಗ್ಗೆ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದು ರೋಗಗಳು ಉಲ್ಬಣಗೊಂಡಾಗ ಕಲ್ಬುರ್ಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗುತ್ತಿದ್ದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.