ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿನ ಗರಗ ಮತ್ತು ಅಮ್ಮಿನಭಾವಿ ಹೋಬಳಿಗಳ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಕ್ಷೇತ್ರ ಭೇಟಿ ನೀಡಿ ರೈತರಿಗೆ ಕೀಟ ನಿರ್ವಹಣೆ ಸಲಹೆ ನೀಡಿದರು.
ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಕಲಾವತಿ ಕಂಬಳಿ, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ, ಕೃಷಿ ಅಧಿಕಾರಿಗಳಾದ ಗುರುಪ್ರಸಾದ ಹಿರೇಮಠ ಮತ್ತು ರೇಖಾ ಬೆಳ್ಳಟಿ ಅವರಿದ್ದ ತಂಡ ಲೋಕೂರ, ಯಾದವಾಡ, ಕಲ್ಲೂರ ಮತ್ತು ಹೆಬ್ಬಳ್ಳಿ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಒಂದು ತಿಂಗಳಿ0ದ ಮಳೆ ಹಾಗೂ ಮೋಡ ಕವಿದ ವಾತಾವರಣವಿರುವುದರಿಂದ ಹೆಸರು, ಉದ್ದು ಹಾಗೂ ಸೋಯಾಅವರೆ ಬೆಳೆಗಳಲ್ಲಿ ಎಲೆ ಹಾಗೂ ಕಾಯಿ ತಿನ್ನುವ ಕೀಡೆಗಳ ಹಾವಳಿಯು ಅಧಿಕವಾಗಿದೆ. ಆದ್ದರಿಂದ ಇಲಾಖೆಯಿಂದ ಸೂಚಿಸಿದ ಪ್ರಮಾಣದಲ್ಲಿ ಗಿಡದ ಎಲ್ಲ ಭಾಗಗಳಿಗೆ ತಲುಪುವ ಹಾಗೆ ಕೀಟನಾಶಕ ಸಿಂಪರಣೆ ಮಾಡಬೇಕು. ಕೀಟಗಳು ರಾತ್ರಿಯಲ್ಲಿ ತಿನ್ನುವ ಗುಣ ಹೊಂದಿರುವುದರಿ0ದ ಔಷಧ ಸಿಂಪರಣೆಯನ್ನು ಸಂಜೆ 4ರ ನಂತರ ಅಥವಾ ಬೆಳಗ್ಗೆ 10ರೊಳಗೆ ಮಾಡಬೇಕು ಎಂದು ಸಲಹೆ ನೀಡಿದರು.
ಗರಗ ಗ್ರಾಮದ ರೈತರಾದ ಉಳವಯ್ಯ ಚಿಕ್ಕೊಪ್ಪ, ಲೋಕುರ ಗ್ರಾಮದ ದ್ಯಾಮಪ್ಪ ರಂಗಣ್ಣವರ, ಪಡೆಪ್ಪ ಬಾಗಲಕೋಟ, ಯಾದವಾಡ ಗ್ರಾಮದ ಮಹಾಂತೆಶ ಗಳಗಿ, ಮಡಿವಾಳಪ್ಪ ದಿಂಡಲಕೊಪ್ಪ, ಕಲ್ಲೂರ ಗ್ರಾಮದ ಸಿದ್ರಾಮ ದಂಡಿನ ಹಾಗೂ ಹೆಬ್ಬಳ್ಳಿ ಗ್ರಾಮದ ವಿಠ್ಠಲ ಭೊವಿ, ಮಂಜುನಾಥ ಭೀಮಕ್ಕನವರ, ಬಸವರಾಜ ತಟ್ಟಿಮನಿ, ಇತರರಿದ್ದರು.