ಮಡಿಕೇರಿ:
ಜಿಲ್ಲೆಯಲ್ಲಿ ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ಹಾಗೂ ಸೋಮವಾರಪೇಟೆ ಹೀಗೆ ಐದೂ ತಾಲೂಕುಗಳಲ್ಲೂ ಎಲೆ ಸುರುಳಿ ಹುಳುವಿನ ಹಾವಳಿ ಕಾಣಿಸಿಕೊಂಡಿದೆ. ಭತ್ತದ ನಾಟಿ ಮಾಡಿ 20 ರಿಂದ 25 ದಿನಗಳಾಗಿರುವ ಗದ್ದೆಗಳಲ್ಲಿ ಎಲೆ ಸುರುಳಿ ಹುಳುವಿನ ಹಾವಳಿ ಶುರುವಾಗಿದೆ. ಎಲೆ ಸುರುಳಿ ಹುಳುವಿನ ಬಾಧೆ ಸಸಿ ಮಡಿಯಲ್ಲಿ ಮತ್ತು ನಾಟಿ ಮಾಡಿದ ಗದ್ದೆಗಳಲ್ಲಿ ಕಂಡು ಬಂದಿದ್ದು, ಹುಳುಗಳು ಎಲೆಯ ಅಂಚನ್ನು ಮಡಚಿ ಸುರುಳಿ ಸುತ್ತಿಕೊಂಡು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಇದರಿಂದ ಪೈರು ಬೆಳ್ಳಗೆ ಬಿಳುಚಿಕೊಂಡAತೆ ಕಾಣಿಸುತ್ತದೆ. ಬಾಧೆಯು ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ ತೆನೆ ಬರದೆ ನಷ್ಟವುಂಟಾಗುತ್ತದೆ.
ಎಲೆ ಸುರುಳಿ ಹುಳುವಿನ ಹಾವಳಿಯ ಲಕ್ಷಣಗಳು ನಾಟಿ ಮಾಡಿದ ಗದ್ದೆಗಳಲ್ಲಿ ಕಂಡು ಬಂದರೆ ಇದರ ಹತೋಟಿಗೆ ಮೊದಲನೆಯ ಕ್ರಮವಾಗಿ ಗದ್ದೆಯ ಬದುವಿನಲ್ಲಿರುವ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಬೇಕು. ಶಿಫಾರಸ್ಸು ಮಾಡಿರುವಷ್ಟು ಮಾತ್ರ ಸಾರಜನಕ ಗೊಬ್ಬರವನ್ನು ಕೊಡಬೇಕು. ಕೀಟವಿರುವ ಸೂಚನೆಯನ್ನು ನೋಡಿಕೊಂಡು ಇಂಡಾಕ್ಸಿಕಾರ್ಬ್ 0.5 ಮಿ.ಲೀ. ಅಥವಾ ¥s಼ÀÅ್ಲಬೆಂಡಮೈಡ್ 0.4 ಮಿ.ಲಿ ಇವುಗಳಲ್ಲಿ ಯಾವುದಾದರೂ ಒಂದು ಕೀಟನಾಶಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಿಂಪರಣೆ ಮಾಡುವಾಗ ಕೀಟನಾಶಕಕ್ಕೆ ಅಂಟು ದ್ರಾವಣ ಸೇರಿಸಿ ಸಿಂಪಡಿಸುವುದು ಉತ್ತಮ ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ಸಲಹೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ತಜ್ಞರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.