ಮಂಡ್ಯ: ಪಿಇಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ವತಿಯಿಂದ 2022-23ರ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನ.4ರಂದು ಕಾಲೇಜಿನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ ತಿಳಿಸಿದರು.
ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಮಹಾವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತಿದೆ. 2008ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾನಿಲಯದಿಂದ ಸ್ವಾಯತ್ತತೆ ಪಡೆದು ನಂತರ ಎನ್‌ಬಿಎ, ಯುಜಿಸಿ, ನ್ಯಾಕ್ ಮತ್ತು ಎಐಸಿಟಿಇಯಿಂದ ಮಾನ್ಯತೆ ಪಡೆದು 2023ರಲ್ಲಿ ಭಾರತೀಯ ಶ್ರೇಯಾಂಕದ ಎನ್‌ಐಆರ್‌ಎಫ್‌ನಿಂದ 151-200ನೇ ಬ್ಯಾಂಡ್ ಪಡೆದಿದೆ. ಎನ್‌ಐಆರ್‌ಎಫ್ ಇನ್ನೋವೇಷನ್ ರ‌್ಯಾಂಕಿಂಗ್ ಪಟ್ಟಿಯಲ್ಲಿ 11-50ನೇ ಬ್ಯಾಂಡ್ ಪಡೆದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 11 ಸ್ನಾತಕ ಹಾಗೂ 6 ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸುತ್ತಿದ್ದು, ಉತ್ತಮ ಶಿಕ್ಷಣ ನೀಡುವುದರ ಜತೆಗೆ ಉದ್ಯೋಗ ತರಬೇತಿ ಹಾಗೂ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಅದರಂತೆ ಸ್ನಾತಕ ವಿಭಾಗದಲ್ಲಿ 809 ವಿದ್ಯಾರ್ಥಿಗಳ ಪೈಕಿ 722 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಂತೆ ಸ್ನಾತಕೋತ್ತರ ವಿಭಾಗದಲ್ಲಿ 137 ವಿದ್ಯಾರ್ಥಿಗಳ ಪೈಕಿ 133 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 8 ಸ್ನಾತಕ ಹಾಗೂ 5 ಸ್ನಾತಕೋತ್ತರ ವಿಭಾಗದ ಒಟ್ಟು 13 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯಲಿದ್ದಾರೆ ಎಂದು ವಿವರಿಸಿದರು.
ಬೆಳಿಗ್ಗೆ 10.30ಕ್ಕೆ ಆಯೋಜಿಸಿರುವ ಸಮಾರಂಭದಲ್ಲಿ ಮೆ.ಟೆಸ್ಟ್ ಯಂತ್ರದ ಸಹ ಸಂಸ್ಥಾಪಕ ಗಿರೀಶ್ ಶಿವಣ್ಣ ಪ್ರಧಾನ ಭಾಷಣ ಮಾಡುವರು. ಜನತಾ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡುವರು. ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಪ್ರಮಾಣ ಪತ್ರ ವಿತರಿಸುವರು ಎಂದು ಹೇಳಿದರು.
ಉಪ ಪ್ರಾಂಶುಪಾಲ ಡಾ.ಎಸ್.ವಿನಯ್, ಡೀನ್ ಡಾ.ಬಿ.ದಿನೇಶ್‌ಪ್ರಭು, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ.ಜೆ.ಮಹೇಂದ್ರಬಾಬು, ಉಪಡೀನ್ ಡಾ.ಡಿ.ಆರ್.ಉಮೇಶ್, ಉಪಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ್, ವೇಣುಗೋಪಾಲ್ ಹಾಜರಿದ್ದರು.