ಜಿಲ್ಲೆ

ರಾಷ್ಟ್ರಮಟ್ಟದ ಹ್ಯಾಕಥಾನ್‌ನಲ್ಲಿ ಪಿಇಎಸ್ ಪ್ರಾಬಲ್ಯ: ಪ್ರಶಸ್ತಿ ಬಾಚಿಕೊಂಡ ಆತಿಥೇಯ ಸಂಸ್ಥೆ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಎರಡು ದಿನಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ಆತಿಥೇಯ ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾಬಲ್ಯ ಮೆರೆದಿದ್ದಾರೆ.

ಕ್ಲೀನ್ ಎನರ್ಜಿ, ಸ್ಮಾರ್ಟ್ ಸಿಟಿಸ್, ಸುಸ್ಥಿರ ಕೃಷಿ, ಗುಣಮಟ್ಟದ ಶಿಕ್ಷಣ, ಹವಾಮಾನ ಕ್ರಿಯೆ, ಸುಲಭ ಆರೋಗ್ಯ ಸೇವೆಯಂತಹ ಜಾಗತಿಕ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ರೂಪಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹ್ಯಾಕ್‌ಸ್ಪ್ರಿಂಟ್ 5.0 ಶೀರ್ಷಿಕೆಯಡಿ ಸ್ಪರ್ಧೆ ಆಯೋಜಿಸಲಾಗಿತ್ತು.

ವಿವಿಧ ಶೈಕ್ಷಣಿಕ ಸಂಸ್ಥೆಗಳಿಂದ ಒಟ್ಟು 68 ತಂಡ ಮತ್ತು 249 ವಿದ್ಯಾರ್ಥಿಗಳು ಭಾಗವಹಿಸಿದ್ದರು. 24 ಗಂಟೆಯ ತೀವ್ರ ಕೋಡಿಂಗ್ ಸ್ಪ್ರಿಂಟ್‌ನಲ್ಲಿ ತೊಡಗಿದ ತಂಡಗಳು, ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಹೊಸ ಪರಿಹಾರ ರೂಪಿಸಿದವು. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, ಬ್ಲಾಕ್‌ಚೈನ್ ತಂತ್ರಜ್ಞಾನ, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ವೆಬ್ ಅಪ್ಲಿಕೇಷನ್ ಡೆವಲಪ್ಮೆಂಟ್ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಕೌಶಲ ಪ್ರದರ್ಶಿಸಿ, ಸಾಮಾಜಿಕವಾಗಿ ಹಾಗೂ ಪರಿಣಾಮಕಾರಿ ಯೋಜನೆ ರಚಿಸಿದರು.

ಅಂತಿಮವಾಗಿ ವಿಜೇತರನ್ನು ಘೋಷಣೆ ಮಾಡಲಾಯಿತು. ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, ಬ್ಲಾಕ್‌ಚೈನ್ ತಂತ್ರಜ್ಞಾನ ವಿಭಾಗದಲ್ಲಿ ಪಿಇಎಸ್ ಕಾಲೇಜಿನ ರೋಬೋ ರ‌್ಯಾಪ್ಟರ್ಸ್ ತಂಡ(ಪ್ರ) ಮತ್ತು ಗ್ಯಾವಿಟಿ ತಂಡ(ದ್ವಿ), ಇಂಟರ್ನೆಟ್ ಆಫ್ ಥಿಂಗ್ಸ್ ವಿಭಾಗದಲ್ಲಿ ಪಿಇಎಸ್ ಕಾಲೇಜಿನ ಝೀರೋ ತಂಡ(ಪ್ರ), ಮೈಸೂರಿನ ಎಂಐಟಿ ಕಾಲೇಜಿನ ಬ್ರೈನ್ ಎಕ್ಸ್ ತಂಡ(ದ್ವಿ), ವೆಬ್ ಅಪ್ಲಿಕೇಷನ್ ಡೆವಲಪ್ಮೆಂಟ್ ವಿಭಾಗದಲ್ಲಿ ಬೆಂಗಳೂರು ತಾಂತ್ರಿಕ ಕಾಲೇಜಿನ ತ್ರಯಾಂಕ ತಂಡ(ಪ್ರ) ಮತ್ತು ಪಿಇಎಸ್ ಕಾಲೇಜಿನ ಎರರ್ 404 ತಂಡ(ದ್ವಿ) ಬಹುಮಾನ ಪಡೆದುಕೊಂಡಿತು. ವಿಜೇತರಿಗೆ 60 ಸಾವಿರ ರೂ ನಗದು ಬಹುಮಾನ, ಟ್ರೋಪಿ ಮತ್ತು ಸ್ಟಾರ್ಟ್‌ಅಪ್‌ಗೆ ಅವಕಾಶ ನೀಡಲಾಯಿತು. ಒಟ್ಟಾರೆ ಹ್ಯಾಕಥಾನ್ ಸ್ಪರ್ಧೆ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ ಹೆಚ್ಚಿಸುವುದಲ್ಲದೆ, ಸಾಮಾಜಿಕ ಜವಾಬ್ದಾರಿಯ ಭಾವನೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿತು.

ಪಿಇಟಿ ಕಾರ್ಯದರ್ಶಿ ಶಿವಪ್ರಸಾದ್, ಪಿಇಎಸ್ ಪ್ರಾಂಶುಪಾಲ ಡಾ.ಎನ್.ಎಲ್.ಮುರಳಿಕೃಷ್ಣ, ಪ್ರಾಂಶುಪಾಲರು, ಉಪ ಪ್ರಾಂಶುಪಾಲ ಡಾ.ಎಸ್.ವಿನಯ್, ಸಂಯೋಜಕಿ ಡಾ.ಎಂ.ಎಲ್.ಅನಿತಾ, ಸಂಪನ್ಮೂಲ ವ್ಯಕ್ತಿ ಚಂದನಾ ಶಿವಾನಂದ್ ಇತರರಿದ್ದರು.