ಜಿಲ್ಲೆ

ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಿ:ನ್ಯಾ.ವಿ.ಗೋಪಾಲಗೌಡ

djtrupti

ಬೆಂಗಳೂರು: ಭವಿಷ್ಯದಲ್ಲಿ ತಂತ್ರಜ್ಞಾನವೇ ಮೇಲುಗೈ ಸಾಧಿಸಲಿದೆ ಎಂಬುದು ಕರೊನಾದಿಂದ ಸಾಬೀತುಗೊಂಡಿದೆ. ವಿದ್ಯಾರ್ಥಿಗಳಲ್ಲಿ ಕೌಶಲ್ಯ ಇದ್ದರೆ, ತಂತ್ರಜ್ಞಾನ ಬಳಕೆ ಮಾಡಿಕೊಂಡು ಸಾಕಷ್ಟು ಬೆಳವಣಿಗೆ ಸಾಧಿಸಬಹುದಾಗಿದೆ ಎಂಬುದನ್ನು ಅರಿತುಕೊಳ್ಳಬೇಕೆಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಹೇಳಿದರು.

ಪಿಇಎಸ್ ವಿಶ್ವವಿದ್ಯಾಲಯ ಭಾನುವಾರ ಆಯೋಜಿಸಿದ್ದ 5ನೇ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಕರೊನಾ ಎಂಬ ಸಾಂಕ್ರಾಮಿಕ ಕಾಯಿಲೆಯು ನಮ್ಮ ಜೀವನವಿಧಾನವನ್ನೇ ಸಂಪೂರ್ಣ ಬದಲಾಯಿಸಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ತಂತ್ರಜ್ಞಾನದ ಮಹತ್ವ ಅರಿವಿಗೆ ಬಂದಿದ್ದು, ಈ ಕ್ಷೇತ್ರವು ಭವಿಷ್ಯದಲ್ಲಿ ವಿಫುಲ ಉದ್ಯೋಗವಕಾಶಗಳನ್ನು ಸೃಷ್ಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ಸಾಬೀತು ಮಾಡಿದೆ. ಬಹುತೇಕ ಕಡೆ ಇನ್ನೂ ‘ವರ್ಕ್ ಫ್ರಂ ಹೋಮ್’ ಚಾಲ್ತಿಯಲ್ಲಿದೆ. ಹೈಕೋರ್ಟ್ ಕಲಾಪಗಳು ಸಹ ವೀಡಿಯೋ ಕಾನ್ಫರೆನ್ಸ್‌ಗಳಲ್ಲಿ ನಡೆಯುತ್ತಿವೆ.

ಪ್ರತಿ ದಿನ ಪತ್ರಿಕೆಗಳನ್ನು ಕರೊನಾ ಲಸಿಕೆಯ ಸುದ್ದಿಗಳು ಹೆಚ್ಚಾಗಿವೆ. ಈ ಕರೊನಾ ಸೋಂಕಿಗೆ ಔಷಧ ಕಂಡುಹಿಡಿಯಲು ವಿಜ್ಞಾನಿಗಳು ಪ್ರತಿನಿತ್ಯ ಶ್ರಮಿಸುತ್ತಿದ್ದು, ಶೀಘ್ರದಲ್ಲೇ ಔಷಧ ಬರುವ ವಿಶ್ವಾಸದಲ್ಲಿದ್ದೇವೆ. ಬಳಿಕ ನಮ್ಮ ಜೀವನವಿಧಾನವು ಸಾಮಾನ್ಯ ಸ್ಥಿತಿಗೆ ಮರಳಬಹುದು. ಸಾಧ್ಯವಾದಷ್ಟು ಬೇಗ ಎಲ್ಲವೂ ಸಹಜ ಸ್ಥಿತಿಗೆ ಬರಲಿ. ಇಂಜಿನಿಯರ್‌ಗಳೇ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ನವ ಭಾರತ ನಿರ್ಮಾಣದ ಕಾರ್ಯದಲ್ಲಿ ಇವರ ಪಾತ್ರ ಪ್ರಮುಖವಾದದ್ದಾಗಿದೆ. ಮುಂದಿನ ದಿನಗಳಲ್ಲಿ ಸವಾಲುಗಳ ಜತೆಗೆ ಅಗಾಧವಾದ ಅವಕಾಶಗಳು ಕೂಡ ಇರಲಿವೆ. ಮುಂದೆ ವಿಜ್ಞಾನ ಮತ್ತು ತಂತ್ರಜ್ಞಾನವೇ ಪ್ರಮುಖವಾಗಲಿದ್ದು, ಇದನ್ನು ಅರಿತು ಇಂಜಿನಿಯರುಗಳು ಹೆಚ್ಚಿನ ಜವಾಬ್ದಾರಿಯಿಂದ ಕರ್ತವ್ಯನಿರ್ವಹಿಸಬೇಕೆಂದರು.

ಪಿಇಎಸ್ ವಿವಿ ಕುಲಾಧಿಪತಿ ಡಾ.ಎಂ.ಆರ್. ದೊರೆಸ್ವಾಮಿ, ಕರೊನಾ ಕಾರಣದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸಹ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದೇವೆ. ಕೊನೆಯ ಸೆಮಿಸ್ಟರ್‌ನ ಅರ್ಧಭಾಗದಲ್ಲಿ ಇದ್ದಾಗ ಸಾಂಕ್ರಾಮಿಕ ರೋಗವು ವ್ಯಾಪಿಸಿಕೊಂಡ ಕಾರಣ, ನಮ್ಮ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗದಂತೆ ಆನ್‌ಲೈನ್ ವ್ಯವಸ್ಥೆಗೆ ಹೊಂದಿಕೊಂಡು ಪಾಠ ಮಾಡಿದರು. ನಮ್ಮ ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಮಾತ್ರ ಕೊಂಡೊಯ್ಯುತ್ತಿಲ್ಲ. ಬದಲಾಗಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಗಿಟ್ಟಿಸಿಕೊಂಡು ಹೋಗುತ್ತಿದ್ದು, ಇದು ಗುಣಮಟ್ಟ ಶಿಕ್ಷಣಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ಸಮಾರಂಭದಲ್ಲಿ 2,031 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಭಾಗಗಳಲ್ಲಿ ಅಧಿಕ ಅಂಕಗಳನ್ನು ಪಡೆದ 14 ಮಂದಿಗೆ ಚಿನ್ನದ ಪದಕ ಹಾಗೂ 59 ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ಹಾಗೂ ಇಬ್ಬರಿಗೆ ಪಿ.ಎಚ್‌ಡಿ ನೀಡಿ ಪುರಸ್ಕರಿಸಲಾಯಿತು. ಸುರಕ್ಷತೆ ದೃಷ್ಟಿಯಿಂದ ಪದಕ ವಿಜೇತರಿಗೆ ಮಾತ್ರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ಹೆಚ್ಚಿನ ಅಂಕಗಳಿಸಿರುವದಕ್ಕೆ ಖುಷಿಯಾಗುತ್ತಿದೆ. ಕರೊನಾ ಇದ್ದರೂ ತರಗತಿ ಮತ್ತು ಪ್ಲೇಸ್‌ಮೆಂಟ್‌ಗೆ ತೊಂದರೆಯಾಗಿಲ್ಲ. ಸದ್ಯ ಖಾಸಗಿ ಸಂಸ್ಥೆಯಲ್ಲಿ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಕರೊನಾಗೆ ಔಷಧಿ ಕಂಡುಹಿಡಿಯುವ ಕಾರ್ಯದಲ್ಲಿದ್ದೇವೆ. ಎಂ.ಮೇಘನಾ, ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಬಂಗಾರ ಪದಕ ವಿಜೇತೆ
ಇಲ್ಲಿ ಉತ್ತಮವಾದ ಶಿಕ್ಷಣ ದೊರೆಯುತ್ತಿರುವುದರಿಂದ ರ‌್ಯಾಂಕ್ ಪಡೆಯಲು ಅನುಕೂಲವಾಯಿತು. ಸದ್ಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪಿ.ಎಚ್‌ಡಿ ಮಾಡಲು ವಿದೇಶಕ್ಕೆ ತೆರಳುವ ಆಲೋಚನೆ ಇದೆ.ಕ್ರಿಸ್ಟಿ ಜಾಕೋಬ್, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಂಗಾರ ಪದಕ ವಿಜೇತ