ಮಂಡ್ಯ: ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪ್ರತಿಷ್ಠಿತ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ನೊಂದಿಗೆ ಐದು ವರ್ಷದ ತಿಳಿವಳಿಕೆಯ ಒಪ್ಪಂದಕ್ಕೆ ಸಹಿ ಮಾಡಿದೆ. ಇದರೊಂದಿಗೆ ಈ ಒಪ್ಪಂದಕ್ಕೆ ಸಹಿ ಹಾಕಿದ ರಾಜ್ಯದ ಕೆಲವೇ ಸಂಸ್ಥೆಗಳ ಸಾಲಿಗೆ ಪಿಇಎಸ್ ಕೂಡ ಸೇರ್ಪಡೆಯಾಗಿದೆ.
ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅವರು ಸಂಸ್ಥೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶ ಹಾಗೂ ದೂರದೃಷ್ಟಿಯೊಂದಿಗೆ ಇಂತಹ ಮಹತ್ವದ ಒಪ್ಪಂದ ಮಾಡಿಕೊಂಡಿದ್ದಾರೆ. ಇನ್ನು ಈ ಒಪ್ಪಂದದಂತೆ ಪಿಇಎಸ್ ಕಾಲೇಜಿನಲ್ಲಿ ‘ಕಂಪ್ಯೂಟರ್ ಸೈನ್ಸ್ ಆ್ಯಂಡ್ ಬ್ಯುಸಿನೆಸ್ ಸಿಸ್ಟಮ್ಸ್’ ಎಂಬ ಉದಯೋನ್ಮುಖ ತಂತ್ರಜ್ಞಾನಗಳ ಬಗೆಗಿನ ಕೋರ್ಸ್ ಆರಂಭಿಸುವ ಉದ್ದೇಶವಾಗಿದೆ. ಈಗಾಗಲೇ ಕೋರ್ಸ್ ಪ್ರಾರಂಭವಾಗಿದೆ.
ಪ್ರಮುಖವಾಗಿ ಗಮನಿಸುವುದಾದರೆ ಈ ಕೋರ್ಸ್ ‘ಮುಂದಿನ ಪೀಳಿಗೆಯ ಉದ್ಯಮಕ್ಕೆ ಉದಯೋನ್ಮುಖ ಇಂಜಿನಿಯರ್‌ಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ. ಈ ಒಪ್ಪಂದದಲ್ಲಿ ಸಾಕಷ್ಟು ವಿಶೇಷತೆಗಳನ್ನು ಕಾಣಬಹುದು. ಟಿಸಿಎಸ್ ಸಂಸ್ಥೆ ತಜ್ಞರು ಮತ್ತು ಶಿಕ್ಷಕರು ಜಂಟಿಯಾಗಿ ರೂಪಿಸಿದ ಈ ಕೋರ್ಸ್ ಕಂಪ್ಯೂಟರ್ ವಿಜ್ಞಾನ ಮತ್ತು ವ್ಯಾಪಾರ ನಿರ್ವಹಣೆಯನ್ನು ಸಮಗ್ರವಾಗಿ ಅಧ್ಯಯನ ಮಾಡಲು ನೆರವಾಗಲಿದೆ. ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವತ್ತ ಗಮನ ಹರಿಸುತ್ತದೆ. ಜತೆಗೆ ಉದ್ಯಮ ಸಂಬಂಧಿತ ಕೌಶಲಗಳನ್ನು ಬೆಳೆಸುವುದು, ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ಪರಿಚಯ ಮಾಡಿಕೊಡುವುದು, ಸಮಗ್ರ ತರಬೇತಿ ಮತ್ತು ಮಾರ್ಗದರ್ಶನ ನೀಡುವುದು. ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸಲಾಗುತ್ತಿದೆ. ಇದರೊಟ್ಟಿಗೆ ಶಿಕ್ಷಣವನ್ನು ಉದ್ಯಮದ ಅಗತ್ಯಗಳೊಂದಿಗೆ ಜೋಡಿಸುವಲ್ಲಿ ಮತ್ತು ಕಂಪ್ಯೂಟರ್ ವಿಜ್ಞಾನ ಹಾಗೂ ವ್ಯವಹಾರ ವ್ಯವಸ್ಥೆಗಳ ಎರಡರಲ್ಲೂ ಪ್ರವೀಣರಾದ ಪದವೀಧರರನ್ನು ಬೆಳೆಸುವಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.
ಇತ್ತೀಚೆಗೆ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿ ಪತ್ರಗಳ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಉಪ ಪ್ರಾಂಶುಪಾಲ ಡಾ.ಎಸ್.ವಿನಯ್, ಟಿಸಿಎಸ್‌ನ ಅಕಾಡೆಮಿಕ್ ಅಲಯನ್ಸ್ ಗ್ರೂಪ್‌ನ ಡಾ.ಕೆ.ಎಂ.ಸುಸೀಂದ್ರನ್, ವಿ.ಪ್ರವೀಣ್ ಚಂದ್ರನ್, ವಿನಯ್ ಶಿವಪುರ, ಕಾರ್ಯಕ್ರಮ ಮುಖ್ಯಸ್ಥೆ ಡಾ.ಟಿ.ಎಂ.ಗೀತಾಂಜಲಿ ಇತರರಿದ್ದರು.
ಪ್ಲೇಸ್‌ಮೆಂಟ್‌ಗೆ ಹೆಚ್ಚು ಅವಕಾಶ
ಮಹತ್ವದ ಒಪ್ಪಂದದಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಅದರಂತೆ ಸಾಮಾನ್ಯವಾಗಿ ಪ್ಲೇಸ್‌ಮೆಂಟ್ ನಡೆದಾಗ ಒಮ್ಮೆ ಅವಕಾಶ ಸಿಗದಿದ್ದರೆ ಮತ್ತೊಮ್ಮೆ ಪ್ರಯತ್ನಿಸಬಹುದು. ಇದಲ್ಲದೆ ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿ ತರಬೇತಿ, ಪ್ರಾಧ್ಯಾಪಕರಿಗೆ ಬೋಧನಾ ಕೌಶಲ ವೃದ್ಧಿಸುವ ಹೊಣೆಯನ್ನು ಟಿಸಿಎಸ್ ನಿರ್ವಹಣೆ ಮಾಡಲಿದೆ. ಪ್ರಮುಖವಾದ ಅಂಶವೆಂದರೆ ಉದ್ಯೋಗಾವಕಾಶ ಒದಗಿಸುವ ಸಂಸ್ಥೆಗಳ ಪೈಕಿ ಟಿಸಿಎಸ್ ಮುಂಚೂಣಿಯಲ್ಲಿದೆ.
ನಮ್ಮ ಸಂಸ್ಥೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದೊಂದಿಗೆ ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಯೂ ವೃದ್ಧಿಸಲಿದೆ. ಮಾತ್ರವಲ್ಲದೆ ಉದ್ಯೋಗವಕಾಶವೂ ದೊರೆಯಲಿದೆ.ಕೆ.ಎಸ್.ವಿಜಯಾನಂದಪಿಇಟಿ ಅಧ್ಯಕ್ಷ