ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವಿನಾಶ್ ಅವರಿಗೆ ಪ್ರತಿಭಟನಾಕಾರರು ಮನವಿ ನೀಡಿದರು. ಜಿಪಂ ಕಾರ್ಯನಿರ್ವಾಹಕ ಇಂಜಿನಿಯರ್ ವೇಣುಗೋಪಾಲ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾನಾಥ ಇದ್ದರು.  
ಜಿಲ್ಲೆ

ಸೇತುವೆ, ರಸ್ತೆ ಅಭಿವೃದ್ಧಿಗೆ ಆಗ್ರಹ PERUVAI

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಪೆರುವಾಯಿ ಜಂಕ್ಷನ್‌ನಲ್ಲಿ ಪ್ರತಿಭಟನೆ
  • ಅಧಿಕಾರಿಗಳು ಸ್ಥಳಕ್ಕಾಗಮಿಸಲು ಪಟ್ಟು
ವಿಟ್ಲ: ಪೆರುವಾಯಿ- ಪಕಳಕುಂಜ ರಸ್ತೆಯ ಕೆದುಮೂಲೆ, ಪೆರುವಾಯಿ ಸೇತುವೆ ಹಾಗೂ ಪೆರುವಾಯಿ- ಬೆರಿಪದವು ರಸ್ತೆಯ ಪೇರಡ್ಕ ಸೇತುವೆಯನ್ನು ವೈಜ್ಞಾನಿಕ ರೀತಿಯಲ್ಲಿ ಅಗಲೀಕರಣಗೊಳಿಸಬೇಕು. ಪೆರುವಾಯಿಯಿಂದ ಬಾಳಶೆಟ್ಟಿಮೂಲೆ ಮೂಲಕ ಹಾದುಹೋಗುವ ಕನ್ಯಾನ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ತರಬೇಕು. ಓಣಿಬಾಗಿಲುವಿನಿಂದ ಪಕಳಕುಂಜ ತನಕ ರಸ್ತೆ ಅಗಲೀಕರಣ ಮಾಡಬೇಕು ಎಂದು ಆಗ್ರಹಿಸಿ ಪೆರುವಾಯಿ ಜಂಕ್ಷನ್‌ನಲ್ಲಿ ಸೋಮವಾರ ನಾಗರಿಕರು ಪ್ರತಿಭಟನೆ ನಡೆಸಿದರು.
ಸೇತುವೆ ಇಕ್ಕೆಲಗಳಿಗೆ ಕೆಂಪುಕಲ್ಲು ಹಾಕಿ ಜನರ ಕಣ್ಣೊರೆಸುವ ಕೆಲಸ ಮಾಡಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ದುರಸ್ತಿ ಮಾಡಬೇತು. ಹೊಸ ಸೇತುವೆ ನಿರ್ಮಾಣವಾಗುವವರೆಗೆ ಎರಡೂ ಸೇತುವೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳು, ಎಚ್ಚರಿಕೆ ಸೂಚನಾಫಲಕಗಳು, ಭದ್ರತಾ ತಡೆಗೋಡೆಗಳು ಹಾಗೂ ಇತರೆ ಸುರಕ್ಷತಾ ವ್ಯವಸ್ಥೆಗಳನ್ನು ತುರ್ತಾಗಿ ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಸ್ತೆತಡೆ: ಮಿನಿ ಲಾರಿಗಳು ಬರುತ್ತಿದ್ದಂತೆ ಮಳೆಯನ್ನೂ ಲೆಕ್ಕಿಸದೆ, ರಸ್ತೆಯಲ್ಲಿ ನಿಂತು ತಡೆಯೊಡ್ಡಿದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದಾಗ ಲಾರಿ ಮುಂದೆಯೇ ಮಲಗಿ ಯಾವುದೇ ಕಾರಣಕ್ಕೂ ಅಧಿಕಾರಿಗಳು ಬಾರದೆ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಕೊನೆಗೆ ಬೆಳಗ್ಗೆ ೧೦ ಗಂಟೆಗೆ ಬರುತ್ತೇವೆ ಎಂದಿದ್ದ ಅಧಿಕಾರಿಗಳು ೧೧.೩೦ಕ್ಕೆ ಸ್ಥಳಕ್ಕೆ ಆಗಮಿಸಿದರು.
ಮುರುವ ಮಹಾಬಲ ಭಟ್, ಗೋಪಾಲ ಶೆಟ್ಟಿ, ರಾಘವ ಬೆರಿಪದವು, ಗಣೇಶ್ ಕುಮಾರ್ ದೇಲಂತಮಲು ಮಾತನಾಡಿದರು. ಯತೀಶ್ ಪೆರುವಾಯಿ, ಮೋಕ್ಷಿತ್, ಪ್ರಭಾಕರ ಶೆಟ್ಟಿ, ವಿಷ್ಣು ಕನ್ನಡಗುಳಿ, ಎಸ್.ನಾರಾಯಣ, ಜಯರಾಮ ಆಳ್ವ, ಕೃಷ್ಣ ರಾಜೇಶ್ವರಿ, ಲಲಿತಾ ಅಶ್ವತ್ಥ ನಗರ, ಅಶೋಕ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

ಸೂಕ್ತ ಕ್ರಮದ ಭರವಸೆ

ಸಂಸದ, ಶಾಸಕ, ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜಿಪಂ ಕಾರ್ಯನಿರ್ವಾಹಕ ಇಂಜಿನಿಯರ್ ವೇಣುಗೋಪಾಲ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾನಾಥ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವಿನಾಶ್ ಸ್ಥಳಕ್ಕಾಗಮಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
"

ತುರ್ತು ಕ್ರಮವಾಗಿ ಕಲ್ಲು ಇಟ್ಟಿದ್ದು, ಅಪಾಯ ತಡೆಯಲು ಕಬ್ಬಿಣ ತಡೆಬೇಲಿ ನಿರ್ಮಿಸಲಾಗುವುದು. ಜಿಲ್ಲಾಧಿಕಾರಿಗೆ ಇಲಾಖೆಯಿಂದ ಸೇತುವೆಯ ಪ್ರಸ್ತಾವನೆ ಕಳುಸಿದ್ದು, ಅನುದಾನ ಬಾರದ ಕಾರಣ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ. ವಾರದಲ್ಲಿ ಅಗತ್ಯ ಕ್ರಮ ಕೈಗೊಂಡು ೧೫ ದಿನದಲ್ಲಿ ಸೇತುವೆ ವಿನ್ಯಾಸವನ್ನು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ನೀಡಲಾಗುವುದು.

— ವೇಣುಗೋಪಾಲ, ಜಿಪಂ ಕಾರ್ಯನಿರ್ವಾಹಕ ಇಂಜಿನಿಯರ್