ಜಿಲ್ಲೆ

ಗ್ರಾಪಂ ಅಧ್ಯಕ್ಷೆ, ನೌಕರ ಲೋಕಾ ಬಲೆಗೆ - ಕೊಳವೆಬಾವಿ ಮಂಜೂರಾತಿಗೆ ಫಲಾನುಭವಿಗಳಿಂದ ಹಣದ ಬೇಡಿಕೆ

Mangaluru - Nishantha Narayana

ವಿಟ್ಲ: ಕೃಷಿ ಜಮೀನಿಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಬೋರ್‌ವೆಲ್ ಹಾಕಿಸಿಕೊಡಲು ಕೇಳಿದಾಗ ಹತ್ತು ಸಾವಿರ ಲಂಚದ ಹಣಕ್ಕೆ ಬೇಡಿಕೆಯಿಟ್ಟ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಸೆ.೪ರಂದು ಪೆರುವಾಯಿ ಪಂಚಾಯಿತಿ ಅಧ್ಯಕ್ಷೆ ಮೇಲೆ ಪ್ರಕರಣ ದಾಖಲಾಗಿದ್ದು, ಶನಿವಾರ ಲೋಕ ಟ್ಯಾಪ್ ಕಾರ್ಯಾಚರಣೆ ನಡೆದಿದೆ.

ಪಂಚಾಯಿತಿ ಅಧ್ಯಕ್ಷೆ ನೆಫೀಸಾ ಯಾನೆ ನೆಫಿಸ್ಸಾ, ಬಿಲ್ ಕಲೆಕ್ಟರ್ ವಿಲಿಯಂ ಲೋಕಾಯುಕ್ತ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ. ಸೆ.೬ರಂದು ನೆಫೀಸಾ ಸೂಚನೆಯಂತೆ ಬಿಲ್ ಕಲೆಕ್ಟರ್ ವಿಲಿಯಂ ೧೦ ಸಾವಿರ ರೂ. ಲಂಚದ ಹಣ ಪಡೆದುಕೊಳ್ಳುವ ಸಂದರ್ಭ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಽಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆ ಉಪಾಽಕ್ಷಕರಾದ ಡಾ.ಗಾನಾ ಪಿ.ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್., ರವಿ ಪವಾರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಯಾಕಾಗಿ ಲಂಚ?

ಪೆರುವಾಯಿ ಗ್ರಾಮದಲ್ಲಿರುವ ೧ ಎಕರೆ ಕೃಷಿ ಜಮೀನಿಗೆ ನೀರಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಸರ್ಕಾರದ ಯೋಜನೆ ಮೂಲಕ ಒಂದು ಕೊಳವೆಬಾವಿ ಮಾಡಿಕೊಡಲು ೨೦೨೪ರಲ್ಲಿ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂದರ್ಭ ಸತಾಯಿಸಿ ಕೊನೆಯಲ್ಲಿ ಹೆಸರನ್ನು ಲಿಸ್ಟ್‌ನಿಂದ ಕೈಬಿಟ್ಟಿದ್ದರು. ೨೦೨೫ರಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಸರ್ಕಾರ ಕೃಷಿಕರಿಗೆ ಕೊಳವೆ ಬಾವಿ ಮಾಡಿಕೊಡುತ್ತಿರುವುದು ತಿಳಿದು ಮತ್ತೆ ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದು, ಕಚೇರಿಯಲ್ಲಿ ವಿಚಾರಿಸಿದರು ಕೂಡ ಸರಿಯಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಸೆ.೨ರಂದು ಮತ್ತೆ ಪಂಚಾಯಿತಿಗೆ ಹೋಗಿ ವಿಚಾರಿಸಿದಾಗ ನಿಮಗೆ ಬೋರ್‌ವೆಲ್ ಉಚಿತವಾಗಿ ಆಗುತ್ತದೆ, ಬೆಂಗಳೂರು ಆಫೀಸ್‌ಗೆ ಹತ್ತು ಸಾವಿರ ಕೊಡುವುದಕ್ಕಿದೆ. ಹಣ ಕೊಟ್ಟರೆ ಪಾಸ್ ಮಾಡುತ್ತಾರೆ, ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ. ಹಣ ತಗೊಂಡು ಬನ್ನಿ, ನೀವು ಹಣ ಕೊಟ್ಟರೆ ಮಾತ್ರ ನಿಮಗೆ ಬೋರ್‌ವೆಲ್ ಪಾಸ್ ಮಾಡಿಸಿ ಕೊಡುತ್ತೇನೆ ಎಂದು ಪಂಚಾಯಿತಿ ಅಧ್ಯಕ್ಷೆ ನೆಫೀಸಾ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಫಲಾನುಭವಿ ಅಷ್ಟು ಹಣವಿಲ್ಲದ ಕಾರಣ ವಾಪಾಸಾಗಿದ್ದರು.