ಮನೆಗಳಲ್ಲಿ ಹಸಿಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವ ವ್ಯವಸ್ಥೆ ಜತೆಗೆ ಒಣ ಕಸವನ್ನು ಹಣವಾಗಿ ಪರಿವರ್ತಿಸಿಕೊಳ್ಳಬೇಕು ಹೊರತು ಅದನ್ನು ವಿಷವಾಗಿ ಮಾರ್ಪಾಡು ಮಾಡಬಾರದು. ಕಸ ಸಂಗ್ರಹಿಸಿ ವಿಂಗಡಿಸುವ ಜವಾಬ್ದಾರಿ ಗ್ರಾಪಂನದ್ದಾದರೆ, ತಾಪಂ ಹಾಗೂ ಜಿಪಂಗಳು ಅದರ ವಿಲೇವಾರಿ ಮಾಡುತ್ತವೆ. ಕಸ ಮುಕ್ತ ಗ್ರಾಮ ಆಗದೇ ಹೋದರೆ, ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತದೆ ಎಂದು ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಎಚ್ಚರಿಸಿದರು.
ಪಂಚಾಯಿತಿ ಸ್ವಚ್ಛ ಸಂಕೀರ್ಣ ಸಮೀಪ ಪೆರುವಾಯಿ ಗ್ರಾಪಂ ಆಡಳಿತ ಪ್ಲಾಸ್ಟಿಕ್ ತ್ಯಾಜ್ಯ ಬೆಂಕಿ ಹಚ್ಚಿ ಪರಿಸರ ಮಾಲಿನ್ಯ ಉಂಟು ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಜನಶಿಕ್ಷಣ ಟ್ರಸ್ಟ್ ಹಾಗೂ ಸುಗ್ರಾಮ ತಂಡದ ಪದಾಽಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ ಅವರು ಗ್ರಾಪಂನ ಸ್ವಚ್ಛತಾ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಅರಿವು ಮೂಡಿಸುವ ಕಾರ್ಯ ಮಾಡಿದರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಮಾತನಾಡಿ ಕಸ ಸಂಗ್ರಹಣೆಯ ಕಾರ್ಯವನ್ನು ವಾರದ ಎಲ್ಲ ದಿನ ಮಾಡುವ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಕಸ ಸಂಗ್ರಹ ಜತೆಗೆ ಸ್ವಚ್ಛತಾ ತೆರಿಗೆ ಸಂಗ್ರಹಿಸಿದರೆ, ಸಿಬ್ಬಂದಿಯ ವೇತನ ಹೆಚ್ಚಳ ಮಾಡಲು ಸಾಧ್ಯವಿದೆ. ಹಸಿ ಕಸದಿಂದ ಗೊಬ್ಬರ ತಯಾರಿಸುವ ಮೂಲಕ ಅದನ್ನು ಆದಾಯವಾಗಿ ಪರಿವರ್ತನೆ ಮಾಡಬಹುದಾಗಿದೆ. ಜತೆಗೆ ವೈಜ್ಞಾನಿಕ ರೀತಿಯಲ್ಲಿ ಕಸವಿಲೇವಾರಿಯಿಂದ ಉತ್ತಮ ಭವಿಷ್ಯ ಕಂಡುಕೊಳ್ಳಬಹುದಾಗಿದೆ ಎಂದರು.
ಸ್ವಚ್ಛ ಸಂಕೀರ್ಣದ ಆವರಣದಲ್ಲಿ ಕ್ಯಾನ್ಸರ್ ನಿವಾರಕ ಸಿಮರೋಬ ಗಿಡ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ಸುಗ್ರಾಮ ಸಂಯೋಜಕ ಚೇತನ್, ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್ ಬಾಳೆಪುಣಿ, ಪೆರುವಾಯಿ ಗ್ರಾಪಂ ಅಧ್ಯಕ್ಷೆ ನಫೀಸಾ ಕೆ. ಉಪಾಧ್ಯಕ್ಷೆ ಲಲಿತಾ, ಸದಸ್ಯರಾದ ರಾಜೇಂದ್ರನಾಥ ರೈ, ರಶ್ಮಿ ಎಂ., ಬಾಲಕೃಷ್ಣ ಪೂಜಾರಿ ಕೆ., ವರುಣ್ ರೈ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ.ವನಿತಾ ಎಂ., ಸ್ವಚ್ಛ ವಾಹನ ಚಾಲಕಿ ಅನಿತಾ ಪಿ., ಸ್ವಚ್ಛತಾ ಸಿಬ್ಬಂದಿ ರೇವತಿ, ರತ್ನಾವತಿ, ಆಶಾ ಕಾರ್ಯಕರ್ತೆ ರೇವತಿ, ಪಂಚಾಯಿತಿ ನೌಕರ ವಿಲಿಯಂ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ವರದಿಗೆ ಸ್ಪಂದನೆ
ಪೆರುವಾಯಿ ಗ್ರಾಮ ಪಂಚಾಯಿತಿ ಸ್ವಚ್ಛ ಸಂಕೀರ್ಣ ಘಟಕದ ಸಮೀಪ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಮೂಲಕ ಪರಿಸರ ಮಾಲಿನ್ಯ ಉಂಟುಮಾಡುತ್ತಿದೆ ಎಂದು ಪರಿಸರದಿನದಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಜನ ಶಿಕ್ಷಣ ಟ್ರಸ್ಟ್ ಹಾಗೂ ಸುಗ್ರಾಮ ತಂಡದ ಸದಸ್ಯರು ಸ್ಥಳಕ್ಕಾಗಮಿಸಿ ಪಂಚಾಯಿತಿ ವತಿಯಿಂದ ಮುಂದೆ ಇಂತಹ ತಪ್ಪುಗಳಾಗದಂತೆ ಸೂಕ್ತ ಮಾರ್ಗದರ್ಶನ ನೀಡಿದೆ.
ಒಣ ಕಸ ವಿಲೇವಾರಿ:
ಸ್ವಚ್ಛ ಸಂಕೀರ್ಣ ಘಟಕದಲ್ಲಿ ಸಂಗ್ರಹವಾಗಿದ್ದ ಸುಮಾರು ೩೭೧ ಕೆ. ಜಿ. ರಟ್ಟು, ೩೯೭ ಕೆ.ಜಿ. ಪ್ಲಾಸ್ಟಿಕ್, ೫೬ ಕೆ.ಜಿ.ಪುಸ್ತಕವನ್ನು ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್ ಬಾಳೆಪುಣಿ ಖರೀದಿ ಮಾಡಿ ಒಣ ಕಸ ವಿಲೇವಾರಿ ಮಾಡಿದರು. ರಟ್ಟಿಗೆ ೨೯೬೮ರೂ., ಪ್ಲಾಸ್ಟಿಕ್ ಗೆ ೩೧೭೬ರೂ., ಪುಸ್ತಕಕ್ಕೆ ೩೯೨ರೂ ಸೇರಿ ಒಟ್ಟು ೬೫೩೬ರೂ ಮೌಲ್ಯವನ್ನು ಪಂಚಾಯಿತಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಗುಂಡಿಯಲ್ಲಿ ೨೫೦ರೂ ಕಸ:
ತಾಜ್ಯ ವಿಲೇವಾರಿ ಘಟಕದ ಸಮೀಪದಲ್ಲಿ ಪಂಚಾಯಿತಿ ಗುಂಡಿ ಮಾಡಿ ಪ್ಲಾಸ್ಟಿಕ್ ಸೇರಿ ಅನಗತ್ಯ ವಸ್ತುಗಳನ್ನು ಉರಿಸುವ ಕಾರ್ಯ ಮಾಡುತ್ತಿತ್ತು. ಈ ಬಗ್ಗೆ ವರದಿ ಪ್ರಕಟಗೊಂಡ ಬಳಿಕ ಅದರ ಮೇಲೆ ಅಡಕೆ ಹಾಳೆಯ ತಟ್ಟೆಗಳನ್ನು ಹಾಕಿ ಮುಚ್ಚುವ ಕಾರ್ಯ ಮಾಡಲಾಗಿತ್ತು. ಜನ ಶಿಕ್ಷಣ ಟ್ರಸ್ಟ್ ಪದಾಽಕಾರಿಗಳು ಗುಂಡಿಯಿಂದ ಕಸ ಸಂಗ್ರಹ ಮಾಡಿದ್ದು, ಸುಮಾರು ೨೫೦ರೂ ಮೌಲ್ಯದ ಕಸ ಇದರಲ್ಲಿ ಲಭಿಸಿದೆ.