ತೂಬಗೆರೆ: ಮೀಸಲು ಕ್ಷೇತ್ರ ಹಾಗೂ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಈ ಬಾರಿ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದ ಎಸ್.ಎಸ್.ಘಾಟಿ ( ಮೇಲಿನಜೂಗಾನಹಳ್ಳಿ) ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲ್ ಪಾಲ್ ದಿನ್ನೆ ಗ್ರಾಮಸ್ಥರ ಮನವೊಲಿಸುವಲ್ಲಿ ತಾಲೂಕು ಆಡಳಿತ ಸಲವಾಗಿದೆ.
ಗುರುವಾರ ತಹಸೀಲ್ದಾರ್ ಶಿವರಾಜ್, ಇನ್ಸ್‌ಪೆಕ್ಟರ್ ನವೀನ್‌ಕುಮಾರ್ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಗ್ರಾಮಸ್ಥರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದರು. ಮುಖ್ಯವಾಗಿ ಬೀದಿದೀಪ, ಶುದ್ಧ ಕುಡಿಯುವ ನೀರಿನ ಘಟಕ, ಚರಂಡಿ, ಆಶ್ರಯ ವಸತಿ ಯೋಜನೆಗಳಡಿ ನಿವೇಶನಗಳ ಮಂಜೂರಾತಿ, ಸ್ಮಶಾನದ ಸಮಸ್ಯೆ ಸೇರಿ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಭರವಸೆ ನೀಡುವ ಮೂಲಕ ಮತದಾನ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಹ ಮತದಾನ ಮಾಡಲು ಸಮ್ಮತಿ ಸೂಚಿಸಿದರು ಎಂದು ತಿಳಿದುಬಂದಿದೆ.
ವರದಿ ಗಮನಿಸಿ ಭೇಟಿ: ವಿಜಯವಾಣಿ ಪತ್ರಿಕೆಯಲ್ಲಿನ ಮೀಸಲು ಕ್ಷೇತ್ರಕ್ಕೆ ಪಟ್ಟು ಎಂಬ ಶೀರ್ಷಿಕೆಯಡಿ ವರದಿ ಗಮನಸಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಲ್ಲಿ ಸಾಕಷ್ಟು ಸಮಸ್ಯೆ ಇರುವುದು ಕಂಡು ಬಂದಿದೆ. ಶೀಘ್ರವಾಗಿ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು, ಈ ಬಾರಿ ಕಡ್ಡಾಯವಾಗಿ ಮತದಾನ ಮಾಡುವಂತೆ ಗ್ರಾಮಸ್ಥರ ಮನವೊಲಿಸಲಾಗಿದೆ. ಮತದಾನ ಮಾಡಲು ಒಪ್ಪಿದ್ದಾರೆ ಎಂದು ತಹಸೀಲ್ದಾರ್ ಶಿವರಾಜ್ ತಿಳಿಸಿದ್ದಾರೆ.
ನಮ್ಮ ಗ್ರಾಮದ ಸಮಸ್ಯೆಗಳು ಈಗಲಾದರೂ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೂಡಲೇ ಬೀದಿದೀಪ, ಚರಂಡಿ, ನೀರು, ಆಶ್ರಯ ಸಮಿತಿ ಯೋಜನೆಯಡಿ ಮನೆ, ಸ್ಮಶಾನದ ಸಮಸ್ಯೆ ಬಗೆಹರಿಸುವ ಬಗ್ಗೆ ತಾಲೂಕು ಆಡಳಿತ ಭರವಸೆ ನೀಡಿದೆ. ಈ ಬಾರಿ ಗ್ರಾಮಸ್ಥರೆಲ್ಲರೂ ಮತದಾನ ಮಾಡಲು ಒಪ್ಪಿದ್ದೇವೆ ಎಂದು ಗ್ರಾಮಸ್ಥ ರಮೇಶ್ ತಿಳಿಸಿದ್ದಾರೆ.