ವಿಜಯವಾಣಿ ಸುದ್ದಿಜಾಲ ಧಾರವಾಡ
ವ್ಯಕ್ತಿಯ ಜೀವನದಲ್ಲಿ ವ್ಯಕ್ತಿತ್ವಕ್ಕೆ ಮಹತ್ವದ ಸ್ಥಾನವಿದ್ದು, ದಿ. ಪ್ರೊ. ಆರ್.ವಿ. ಹೊರಡಿ ಅವರದ್ದು ದಿವ್ಯ ವ್ಯಕ್ತಿತ್ವದ ಅನುಕರಣೀಯ ಬದುಕು ಎಂದು ಕರ್ನಾಟಕ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಮಹಾದೇವಪ್ಪ ದಳಪತಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಜಯ ಮತ್ತು ಪ್ರಿಯಾ ಹೊರಡಿ ಹಾಗೂ ದಿ. ಪ್ರೊ. ಆರ್.ವಿ. ಹೊರಡಿ ದತ್ತಿ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರೊ. ಆರ್.ವಿ. ಹೊರಡಿ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಯಾವುದೇ ಟಿಪ್ಪಣಿ ಇಲ್ಲದೆ ನಿರರ್ಗಳವಾಗಿ ಉಪನ್ಯಾಸ ಮಾಡುವ ಚಾಕಚಕ್ಯತೆ ಅವರಲ್ಲಿತ್ತು. ಅವರು ಉಪನ್ಯಾಸಗಳಿಂದ ಪ್ರಭಾವಿತರಾಗಿದ್ದ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಅವರ ಜೀವನ ಇಂದಿನ ಯುವಕರಿಗೆ ಅನುಕರಣೀಯ ಎಂದರು.
ಅಧ್ಯತೆ ವಹಿಸಿದ್ದ ಚಂದ್ರಕಾಂತ ಬೆಲ್ಲದ ಮಾತನಾಡಿ, ಆರ್.ವಿ.ಹೊರಡಿ ಸ್ನೇಹ ಜೀವಿಗಳು ಮಕ್ಕಳಿಗೆ ಶಿಕ್ಷಣದ ಜತೆಗೆ ಒಳ್ಳೆ ಸಂಸ್ಕಾರ ಬೆಳೆಸಿದವರು. ಅವರು ಸದಾಕಾಲ ಎಲ್ಲರಿಗೂ ಸ್ಮರಣೀಯರು ಎಂದರು.
ಪ್ರಭಾವತಿ ಹೊರಡಿ, ಎಸ್.ಜಿ. ಚಿಕ್ಕನರಗುಂದ, ಸತೀಶ ತುರಮರಿ, ಡಾ. ಶೈಲಜಾ ಅಮರಶೆಟ್ಟಿ, ಶಿವಾನಂದ ಭಾವಿಕಟ್ಟಿ, ವೆಂಕಟೇಶ ಮಾಚಕನೂರ, ಡಾ. ಪಿ.ಎಸ್. ಹಳ್ಯಾಳ, ಎನ್. ಆರ್. ಬಾಳಿಕಾಯಿ, ಎಂ.ಜಿ. ಸುಬೇದಾರ, ರವಿಕುಮಾರ ಹತಿರ್, ಎಂ.ಎಸ್. ನರೇಗಲ್, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.