ಹೊಸದುರ್ಗ: ರಾಜ್ಯ ಸರ್ಕಾರಿ ನೌಕರರಿಗೆ 2026ರ ಏಪ್ರಿಲ್ನಿಂದ ಕೇಂದ್ರ ಮಾದರಿ ವೇತನ ಜಾರಿಯಾಗುವುದು ಬಹುತೇಕ ಖಚಿತ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.
ಪಟ್ಟಣದ ಸಿದ್ದರಾಮೇಶ್ವರ ಸಭಾಂಗಣದಲ್ಲಿ ಮಂಗಳವಾರ ರಾಜ್ಯ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ರಾಜ್ಯ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಡಾ. ಸುಧಾಕರ್ ನೇತೃತ್ವದ 7ನೇ ವೇತನ ಆಯೋಗವು ಸರ್ಕಾರಕ್ಕೆ ಕೇಂದ್ರ ಸರ್ಕಾರದ 8ನೇ ವೇತನ ಆಯೋಗದ ವರದಿ ಜಾರಿಯಾದ ನಂತರ ಕೇಂದ್ರ ಮಾದರಿ ವೇತನ ವ್ಯವಸ್ಥೆ ಜಾರಿಗೆ ವರದಿ ನೀಡಿದೆ ಎಂದು ತಿಳಿಸಿದರು.
ದೇಶದ 22 ರಾಜ್ಯಗಳಲ್ಲಿ ಕೇಂದ್ರ ಮಾದರಿ ವೇತನ ವ್ಯವಸ್ಥೆ ಜಾರಿಯಲ್ಲಿದೆ. ರಾಜ್ಯವು ಅಭಿವೃದ್ಧಿಯಲ್ಲಿ 3ನೇ ಸ್ಥಾನ ಹಾಗೂ ಜಿಎಸ್ಟಿ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿದೆ. ಅಭಿವೃದ್ಧಿಗೆ ಸರ್ಕಾರಿ ನೌಕರರ ಕೊಡುಗೆಯಿದೆ. ರಾಜ್ಯ ಸಂಘ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಹೋರಾಟ ಸೇರಿ ಯಾವುದೇ ಮಾರ್ಗದಿಂದಲಾದರೂ ಕೇಂದ್ರ ಮಾದರಿ ವೇತನ ವ್ಯವಸ್ಥೆ ಜಾರಿಗೆ ಪ್ರಯತ್ನಿಸಲಾಗುವುದು ಎಂದರು.
ಸರ್ಕಾರಿ ನೌಕರರ ಬಹುದಿನದ ಬೇಡಿಕೆ ಆರೋಗ್ಯ ಸಂಜೀವಿನಿ ಯೋಜನೆ ಮುಂದಿನ ತಿಂಗಳ ಕೊನೆಯಲ್ಲಿ ಜಾರಿಯಾಗಲಿದೆ. ಪ್ರಕ್ರಿಯೆ ಬಹುತೇಕ ಅಂತಿಮ ಹಂತದಲ್ಲಿದ್ದು, ಘೊಷಣೆಯಷ್ಟೇ ಬಾಕಿಯಿದೆ. ಕಳೆದ 5 ವರ್ಷಗಳ ಅಧಿಕಾರವಧಿಯಲ್ಲಿ 7ನೇ ವೇತನ ಆಯೋಗದ ವರದಿ ಜಾರಿ ಸೇರಿ 22 ಆದೇಶಗಳನ್ನು ಮಾಡಿಸಲಾಗಿದೆ ಎಂದರು.
ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಕ್ರಮವಹಿಸಲಾಗಿದೆ. ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ರಚಿಸಿರುವ ಸಮಿತಿ ಎರಡು ಸಭೆಗಳನ್ನು ನಡೆಸಿದೆ. 3ನೇ ಸಭೆ ಸದ್ಯದಲ್ಲೇ ನಡೆಯಲಿದೆ. ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ದೇಶದಲ್ಲಿ ಓಪಿಎಸ್ ಜಾರಿಯಾದ 5ನೇ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಳ್ಳಲಿದೆ ಎಂದು ತಿಳಿಸಿದರು.
ಬಸವಣ್ಣ ಹೇಳಿದ ಕಾಯಕವೇ ಕೈಲಾಸ ಎನ್ನುವ ಮಾತನ್ನು ಸರ್ಕಾರಿ ನೌಕರರು ವೃತ್ತಿಯಲ್ಲಿ ಅಳವಡಿಸಿಕೊಂಡು ಕೆಲಸ ಮಾಡಬೇಕು. ಸರ್ಕಾರ ಉದ್ಯೋಗ, ಆರ್ಥಿಕ ಭದ್ರತೆ, ಗೌರವ, ನೆಮ್ಮದಿ ಬದುಕನ್ನು ನೀಡಿದೆ. ಸಮಸ್ಯೆಗಳ ನಡುವೆ ಜನರಿಗೆ ಉತ್ತಮ ಸೇವೆ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯದ ಪ್ರಗತಿಗೆ ದಕ್ಷತೆಯಿಂದ ಕೆಲಸ ಮಾಡಬೇಕು ಎಂದರು.
ಗ್ಯಾರಂಟಿಗಳ ನಡುವೆ ರಾಜ್ಯ ಸರ್ಕಾರ 7ನೇ ವೇತನ ಆಯೋಗದ ವರದಿ ಜಾರಿ ಮಾಡಿರುವುದು ಅಭಿನಂದನೀಯ. ರಾಜ್ಯ ಸಂಘವು ಸರ್ಕಾರಿ ನೌಕರರ ಹಿತರಕ್ಷಣೆಗೆ ಸದಾ ಸಿದ್ಧವಿದೆ. ನೀವು ನೀಡಿದ ಅಧಿಕಾರವನ್ನು ನಿಮ್ಮ ಸೇವೆಗೆ ಸಮರ್ಪಿಸುತ್ತೇನೆ ಎಂದು ಹೇಳಿದರು.
ತಾಲೂಕು ಸಂಘದ ಅಧ್ಯಕ್ಷ ಶಾಂತಕುಮಾರ್ ಮಾತನಾಡಿ, ರಾಜ್ಯಾಧ್ಯಕ್ಷ ಷಡಕ್ಷರಿ ಅವರ ಕ್ರಿಯಾಶೀಲತೆಯನ್ನು ಮೆಚ್ಚಿ 2ನೇ ಬಾರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನೌಕರರ ಪರವಾಗಿ ಕೆಲಸ ಮಾಡುವ ವಿಶ್ವಾಸವಿದೆ. ಒಪಿಎಸ್ ಜಾರಿಯಾಗಬೇಕು. ಹೊಸದುರ್ಗದ ನೌಕರರ ಸಂಘಕ್ಕೆ 50 ಲಕ್ಷ ರೂ. ಅನುದಾನ ಒದಗಿಸಿದರೆ ಸುಸಜ್ಜಿತ ಸಮುದಾಯ ಭವನ ನಿರ್ವಿುಸಿ ನೌಕರರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ತಹಸೀಲ್ದಾರ್ ತಿರುಪತಿ ವಿ.ಪಾಟೀಲ್, ತಾಪಂ ಇಒ ಸುನೀಲ್ ಕುಮಾರ್, ಟಿಎಚ್ಒ ಡಾ. ರಾಘವೇಂದ್ರ ಪ್ರಸಾದ್, ಡಾ. ಯು.ಎಸ್. ಸಂಜಯ್, ಸಂಘದ ಕಾರ್ಯದರ್ಶಿ ದಿವಾಕರ್, ರಾಜ್ಯ ಪರಿಷತ್ ಸದಸ್ಯ ಹೇಮಂತ್ ಕುಮಾರ್, ಖಜಾಂಚಿ ಅಭಿಲಾಷ, ಮಾಜಿ ಅಧ್ಯಕ್ಷ ಎಂ.ಆರ್. ಶಾಂತಪ್ಪ, ಗಂಗಾಧರಪ್ಪ ಇತರರಿದ್ದರು.
ಕರ್ತವ್ಯದಲ್ಲಿ ದಕ್ಷತೆ ಇರಲಿ: ಸರ್ಕಾರಿ ನೌಕರರು ದಕ್ಷತೆಯಿಂದ ಕಾರ್ಯನಿರ್ವಹಿಸಿ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕೆಲಸ ಮಾಡಬೇಕು. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸರ್ಕಾರಿ ನೌಕರರರಿಗೆ ಕನಿಷ್ಠ 10 ದಿನಗಳ ರಜೆ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ಹೇಳಿದರು.