ಜಿಲ್ಲೆ

ರೋಟರಿ ಸಂಸ್ಥೆಯಿಂದ ವ್ಯಕ್ತಿತ್ವ ವಿಕಸನ

ಪ್ರಸಿನ್ ಕೆ.ಆರ್

ಬೇಲೂರು: ರೋಟರಿ ಕ್ಲಬ್ ಸದಸ್ಯರಾದರೆ ಆ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳಿಸುವುದಲ್ಲದೆ, ಸಮಾಜ ಮುಖಿ ಕೆಲಸಗಳ ಮೂಲಕ ಅವರ ಜೀವನವನ್ನು ಯಶಸ್ಸಿನತ್ತ ಕೊಂಡೊಯ್ಯಲು ಕ್ಲಬ್ ಮುನ್ನಡಿ ಬರೆಯುತ್ತದೆ ಎಂದು ರೋಟರಿ ಕ್ಲಬ್‌ನ ಪಿಎಚ್‌ಎಫ್ ಡಿ.ಎಸ್.ರವಿ ಹೇಳಿದರು.

ರೋಟರಿ ಕ್ಲಬ್‌ನಿಂದ ಪಟ್ಟಣದ ಆರ್.ವಿ. ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆ ಮಾಡದ ಕೆಲಸವಿಲ್ಲ. ಪ್ರಥಮವಾಗಿ ಪ್ರಪಂಚದಲ್ಲಿ ಪೋಲಿಯೋ ಮುಕ್ತವನ್ನಾಗಿಸಲು ಪಣತೊಟ್ಟು ಯಶಸ್ಸು ಸಾಧಿಸಿದೆ. ಜತೆಗೆ ನಮ್ಮ ಸಂಸ್ಥೆಯ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಕೆಲಸ ಮಾಡಲಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಸದಸ್ಯರಾಗಿ ಕೆಲಸ ಮಾಡುವವರ ವ್ಯಕ್ತಿತ್ವ ವಿಕಸನವಾಗುವುದಲ್ಲದೆ, ಅವರ ಯಶಸ್ಸಿಗೆ ಸಹಕಾರಿಯಾಗಲಿದೆ. ಅಲ್ಲದೆ ಉತ್ತಮ ಪರಿಸರ ಮತ್ತು ಪ್ರಕೃತಿ ಉಳಿಸದಿದ್ದಲ್ಲಿ ಹಲವು ರೀತಿಯಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಮುಂದಿನ ಪೀಳಿಗೆಗೆ ಹಾಗೂ ಉತ್ತಮ ಆರೋಗ್ಯ ನಮ್ಮದಾಗಬೇಕಾದರೆ ಪರಿಸರ ಉಳಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕ್ಲಬ್ ಸದಸ್ಯರು ಗಮನಹರಿಸಿ ಗಿಡಗಳನ್ನು ನೆಟ್ಟು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಬೇಲೂರಿನಲ್ಲಿ ರೋಟರಿ ಸಂಸ್ಥೆ ಉತ್ತಮ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರು ಎಲ್ಲರೊಡಗೂಡಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲಿ ಎಂದರು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಬಿ.ಎಂ.ರಂಗನಾಥ್, ಮುಂದಿನ ದಿನಗಳಲ್ಲಿ ನಮ್ಮ ಕ್ಲಬ್‌ನ ಎಲ್ಲ ಪದಾಧಿಕಾರಿಗಳ ಹಾಗೂ ಸದಸ್ಯರ ಸಹಕಾರದೊಂದಿಗೆ ಉತ್ತಮ ಕೆಲಸ ಮಾಡಲಿದ್ದೇವೆ. ಜತೆಗೆ ಹಿರಿಯರಾದ ಗಂಗಯ್ಯ ಹೆಗಡೆಯವರು ಕೊಡುಗೆ ನೀಡಿರುವ ನಿವೇಶನದಲ್ಲಿನ ಕಟ್ಟಡವನ್ನು ನಮ್ಮ ಅವಧಿಯಲ್ಲೇ ಪೂರ್ಣಗೊಳಿಸಲು ಶ್ರಮಿಸಲಾಗುವುದು. ಕ್ಲಬ್‌ನ ಆಶೋತ್ತರಗಳಾದ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಸ್ವಚ್ಛತೆಗೆ ಆದ್ಯತೆ ನೀಡಿ ಸಮಾಜಮುಖಿಯಾಗಿ ಕೆಲಸ ಮಾಡಲಿದ್ದೇವೆ. ಇದರೊಂದಿಗೆ ವಿಶ್ವ ಪಾರಂಪರಿಕ ಪಟ್ಟಿಗೆ ಬೇಲೂರು ದೇಗುಲ ಸೇರಿದಂತೆ, ನಮ್ಮ ಕ್ಲಬ್‌ಗೂ ಉತ್ತಮ ಹೆಸರು ತರುವಂತಹ ಕೆಲಸಗಳನ್ನು ಎಲ್ಲರ ಸಹಕಾರದೊಂದಿಗೆ ಮಾಡಲಿದ್ದೇವೆ ಎಂದರು.

ಅಸಿಸ್ಟೆಂಟ್ ಗೌವರ್ನರ್ ಸಿ.ಎಸ್.ಮಹೇಶ್, ಜೋನಲ್ ಲೆಫ್ಟಿನೆಂಟ್ ಎಚ್.ಎ.ಆದರ್ಶ, ನೂತನ ಕಾರ್ಯದರ್ಶಿ ಎಚ್.ಕೆ.ರಮೇಶ್, ಖಜಾಂಚಿ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಶಂಭೂಗೌಡ, ಮಾಜಿ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಸಂಸ್ಥೆಯ ಗಣೇಶ್, ಸಂದೇಶ್, ವೈ.ಡಿ.ಲೋಕೇಶ್, ರಾಘವೇಂದ್ರ ಇತರರಿದ್ದರು.