ವಿಜಯಪುರದ ನಂಜನಗೂಡು ರಾವೇಂದ್ರ ಸ್ವಾಮಿಗಳವರ ಮಠದಲ್ಲಿ ಪ್ರವಚನ ಭಾರತಿ ಡಾ. ಕಂಠಪಲ್ಲಿ ಸಮೀರ ಆಚಾರ್ಯ ಪ್ರವಚನ ನೀಡಿದರು. ಆನಂದರಾವ ನಾಯಕ, ಪ್ರಾಣೇಶ ಪಾಟೀಲ ಮತ್ತಿತರರಿದ್ದಾರೆ. 
ಜಿಲ್ಲೆ

ಜ್ಞಾನದಿಂದ ವ್ಯಕ್ತಿತ್ವ ವೃದ್ಧಿ

ಗಿರೀಶ ಸಗರ

ವಿಜಯಪುರ: ನಮ್ಮ ದೇಶದ ಸನಾತನ ಧರ್ಮದ ಜ್ಞಾನನಿಧಿ ಕುರಿತು ಪಾಶ್ಚಾತ್ಯರು ಕೂಡ ಸಂಶೋಧನೆ ನಡೆಸುತ್ತಲಿದ್ದಾರೆ ಎಂದು ಹುಬ್ಬಳ್ಳಿಯ ಪ್ರವಚನ ಭಾರತಿ ಡಾ. ಕಂಠಪಲ್ಲಿ ಸಮೀರ ಆಚಾರ್ಯ ಹೇಳಿದರು.

ನಗರದ ನವರಸಪುರ ಬಡಾವಣೆಯ ನಂಜನಗೂಡು ಶ್ರೀ ರಾವೇಂದ್ರ ಸ್ವಾಮಿಗಳ ಮಠದಲ್ಲಿ ಭಾನುವಾರ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹದ ಭಾನುವಾರ ನಡೆದ ಮೂರನೇ ದಿನದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ, ಜ್ಞಾನದಿಂದ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ದೇಶದ ಜ್ಞಾನ, ಧರ್ಮ ಸನಾತನ ಧರ್ಮವನ್ನು ಕಾಪಾಡುತ್ತದೆ. ಸನಾತನ ಧರ್ಮಕ್ಕೆ ಮೂಲ ವಿದ್ಯೆಯಾಗಿದೆ. ನಿರಂತರ ಭಗವಂತನ ಸ್ಮರಣೆಯಿಂದ ಅಂತಿಮವಾಗಿ ಫಲ ದೊರೆಯಲಿದೆ. ತಾಯಿಯ ಋಣ ಬಹು ದೊಡ್ಡದು, ಅದು ಎಲ್ಲ ಯಜ್ಞಕ್ಕಿಂತ ಮಿಗಿಲಾದುದು. ಅದನ್ನು ತೀರಿಸುವದು ಅಸಾಧ್ಯದ ಮಾತು ಎಂದು ಆಶೀರ್ವಚನದಲ್ಲಿ ಹೇಳಿದರು.

ಕಾಗೆ ಎಂದಿಗೂ ಅಪವಿತ್ರ ಪಯಲ್ಲ, ರಾಮಾಯಣದಲ್ಲಿ ಕಾಗೆಯ ಕುರಿತಾಗಿಯೇ ಒಂದು ಅಧ್ಯಾಯವನ್ನು ಮೀಸಲಾಗಿರಿಸಿದೆ. ಶ್ರೀ ಮದಾಚಾರ್ಯರ ತತ್ವದ ಪ್ರಮುಖ ಅಂಶವೆಂದರೆ ವಿಷ್ಣು ಸ್ಮರಣೆಯಾಗಿದೆ. ನಿಷ್ಕಲ್ಮಷ ಭಕ್ತಿಯಿಂದ ದೇವರ ಪೂಜೆ ಮಾಡಿದರೆ ಭಗವಂತ ನಿಶ್ಚಿತವಾಗಿಯೂ ಒಲಿಯುತ್ತಾನೆ ಎಂದರು.

ಭಾಗವತದಲ್ಲಿ ವಿಮಾನದ ಉಲ್ಲೇಖವಿದೆ. ವಿಮಾನದ ನಿರ್ಮಾಣಕ್ಕೆ ಮೂಲ ಪ್ರೇರಣೆಯೇ ಭಾಗವತ. ಅಲ್ಲದೆ, ರಾಮಾಯಣದಲ್ಲಿ ಪುಷ್ಪಕ ವಿಮಾನ ಕುರಿತು ವಿವರಿಸಲಾಗಿದೆ ಎಂದು ಹೇಳಿದರು.

ಪ್ರವಚನ ಸಪ್ತಾಹದ ಸೇವೆಗೈದ ಹುಬ್ಬಳ್ಳಿಯ ಆನಂದರಾವ ನಾಯಕ ಹಾಗೂ ಕುಟುಂಬದವರು, ಪಂ. ಮಧ್ವೇಶಾಚಾರ್ಯ ಮುತ್ತಗಿ, ಅರ್ಚಕರಾದ ರವಿ ಆಚಾರ್ಯ, ಶ್ರೀಧರಾಚಾರ್ಯ, ದಾಮೋದರಾಚಾರ್ಯ, ಪ್ರಾಣೇಶ ಪಾಟೀಲ, ವ್ಯಾಸಾಚಾರ್ಯ ಕಟ್ಟಿ, ವಾಮನರಾವ ದೇಶಪಾಂಡೆ (ಬೀಳಗಿ) ಮತ್ತಿತರರಿದ್ದರು.