ಜಿಲ್ಲೆ

ಸೃಜನಶೀಲ ಕಾರ್ಯದಿಂದ ವ್ಯಕ್ತಿತ್ವ ವಿಕಸನ

ಜಿ.ಹೆಚ್. ಧನ್ಯಕುಮಾರ್

ಎನ್.ಆರ್.ಪುರ: ಎಲ್ಲ ಧರ್ಮವನ್ನು ಗೌರವಿಸುವ, ಪ್ರೀತಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಕುವೆಂಪು ಹೇಳಿದಂತೆ ವಿಶ್ವ ಮಾನವರಾಗಲು ಸಾಧ್ಯ ಎಂದು ಜಿಪಂ ಮಾಜಿ ಅಧ್ಯಕ್ಷ ಪಿ.ಜೆ.ಆಂಟೋನಿ ಹೇಳಿದರು.
ಪಟ್ಟಣದ ಕೃಷಿ ಭವನದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಂಘ, ಸಂಸ್ಥೆಗಳು ಯುವಜನಾಂಗವನ್ನು ಕ್ರಿಯಾ ಶೀಲವಾಗಿಸುವ ನಿಟ್ಟಿನಲ್ಲಿ ವ್ಯಕ್ತಿತ್ವ ಬೆಳೆಸುವ ಕಾರ್ಯ ಮಾಡಬೇಕು. ಸೃಜನ ಶೀಲ ಕಾರ್ಯ ಮಾಡಿದಾಗ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ. ಜಗತ್ತನ್ನು ಅರಿಯಲು ಭಾಷೆ ಮತ್ತು ಜ್ಞಾನದ ಅವಶ್ಯಕತೆ ಇದೆ ಎಂದರು.
ರಾಮನಗರ ಜಿಲ್ಲೆ ಲೋಕಾಯುಕ್ತ ಡಿವೈಎಸ್‌ಪಿ ಸುಧೀರ್ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಜನ ಸಾಮಾನ್ಯರ ಕೆಲಸ ಮಾಡಿಕೊಡುವಲ್ಲಿ ವಿಳಂಬ ಮಾಡಿ ಕಿರುಕುಳ ನೀಡಿದರೆ ಧೈರ್ಯದಿಂದ ಲೋಕಾಯುಕ್ತಕ್ಕೆ ದೂರು ನೀಡಬೇಕು. ಹಾಗಾಗಿ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಡಬೇಕು ಎಂದರು.
ಜೇಸಿವಲಯ 14ರ ಉಪಾಧ್ಯಕ್ಷ ಕೆ.ಎ.ಸೃಜನ್ ಮಾತನಾಡಿ, ಜೇಸಿ ಸಂಸ್ಥೆ ಆರಂಭವಾಗಿ 75 ವರ್ಷ ಕಳೆದಿದ್ದು, ವಿಶ್ವಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ಜೇಸಿ ಸಂಸ್ಥೆ ವ್ಯಕ್ತಿತ್ವ ವಿಕಸನಗೊಳಿಸುವ ಸಂಸ್ಥೆಯಾಗಿದೆ.106 ದೇಶಗಳಲ್ಲಿ 1.56 ಲಕ್ಷ ಸದಸ್ಯರನ್ನು ಹೊಂದಿದೆ. ಜ್ಞಾನದಿಂದ ಅಧಿಕಾರ ಸಿಗಬಹುದು. ಆದರೆ ಸಮಾಜದಲ್ಲಿ ಗೌರವ ಸಿಗಬೇಕಾದರೆ ವ್ಯಕ್ತಿತ್ವ ಅವಶ್ಯಕ. ಜೇಸಿಸಂಸ್ಥೆ ಯುವಜನರಲ್ಲಿ ವ್ಯಕ್ತಿತ್ವ ವಿಕಸನಗೊಳಿಸುವ ಕೆಲಸ ಮಾಡುತ್ತಿದೆ ಎಂದರು.
ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ಇದೇ ಸಂದ ಪಿಎಸ್‌ಐ ಬಿ.ಎಸ್.ನಿರಂಜನಗೌಡ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜೇಸಿ ನಿಕಟಪೂರ್ವ ಅಧ್ಯಕ್ಷ ಕೆ.ಗಂಗಾಧರ್, ವಲಯ ಅಧಿಕಾರಿ ಚರಣ್‌ರಾಜ್, ಸಪ್ತಾಹದ ಪ್ರಧಾನ ಕಾರ್ಯದರ್ಶಿ ಮಿಥುನ್‌ಗೌಡ, ಕಾರ್ಯದರ್ಶಿ ಎಂ.ವಿನುತ್, ಎಚ್.ಎಸ್.ಪೂರ್ಣೇಶ್, ಎ.ಎಸ್.ರಿಜಾ, ಎಡೆನ್, ಪ್ರೀತಂ ಇದ್ದರು.