ವಿಜಯವಾಣಿ ಸುದ್ದಿಜಾಲ ಧಾರವಾಡ
ಎನ್‌ಎಸ್‌ಎಸ್ ಶಿಬಿರಗಳ ಆಯೋಜನೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಶಿಬಿರದಿಂದ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಲ್ಲಿ ಭಾಗವಹಿಸುವಂತೆ ಮಾಡಬಹುದು. ಇದರಿಂದ ವಿದ್ಯಾರ್ಥಿ ಹಾಗೂ ಸಮಾಜದ ನಡುವೆ ಬಂಧತ್ವ ಹಾಗೂ ಧರ್ಮಸಹಿಷ್ಣುತೆ ಬೆಳೆಯುತ್ತದೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ವತಿಯಿಂದ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಏರ್ಪಡಿಸಿರುವ ಎನ್‌ಎಸ್‌ಎಸ್ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಜನತೆಯಲ್ಲಿ ರಾಷ್ಟ್ರೀಯತೆ, ಭಾವೈಕ್ಯತೆ, ಸಹಬಾಳ್ವೆ, ನಾಯಕತ್ವ ಗುಣ ಬೆಳೆಸುವುದು, ಸ್ವಚ್ಛ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಿಸುವಲ್ಲಿ ಶ್ರಮಿಸುವುದು ಶಿಬಿರದ ಉದ್ದೇಶ. ಅದರಂತೆ ಗ್ರಾಮಗಳಲ್ಲಿ ಶಿಬಿರ ಆಯೋಜಿಸುವುದರಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದ ಜನ ಜೀವನದ ಅನುಭವ ನೀಡಿದಂತಾಗುತ್ತದೆ. ಗ್ರಾಮದಲ್ಲಿನ ಸಮಸ್ಯೆಗಳನ್ನು ಗಮನಿಸಿ ಅವುಗಳನ್ನು ಬಗೆಹರಿಸುವಲ್ಲಿ ಶ್ರಮ ವಹಿಸಬೇಕಾಗುತ್ತದೆ ಎಂದರು.
ಗ್ರಾಪಂ ಉಪಾಧ್ಯಕ್ಷ ವಿಠ್ಠಲ ಭಟ್ಟಂಗಿ ಮಾತನಾಡಿ, ಎನ್‌ಎಸ್‌ಸ್ ಶಿಬಿರಗಳ ಆಯೋಜನೆ ನಗರ ಭಾಗದ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಸಂಸ್ಕೃತಿ ಬೆಳೆಸುತ್ತದೆ. ಹಿರಿಯರಿಗೆ ಗೌರವ ಕೊಡುವುದನ್ನು, ಆಚಾರ ವಿಚಾರಗಳನ್ನು ಕಲಿಸುತ್ತದೆ ಎಂದರು.
ಗ್ರಾಪಂ ಸದಸ್ಯ ಪಾಲಾಕ್ಷ ಹಾರೋಬಿಡಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುವರ್ಣಾ ಕೊಟ್ರಿ, ಮಹಾವೀರ ಉಪಾಧ್ಯೆ, ಜಿನೇಂದ್ರ ಕುಂದಗೋಳ, ಈರಪ್ಪ ಪತ್ತಾರ, ವಿವೇಕ ಲಕ್ಷ್ಮೇಶ್ವರ, ಮಲ್ಲವ್ವ ಬೆನಪ್ಪನವರ, ಗೀತಾ ಬೆಟಗೇರಿ, ಗ್ರಾಮಸ್ಥರು, ಇತರರು ಇದ್ದರು.
ರೋನಿಲ್ ಮನೋಹರ ಸ್ವಾಗತಿಸಿದರು. ಡಾ. ಸೂರಜ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ನಿರೂಪಿಸಿದರು. ವಿದ್ಯಾ ವಂದಿಸಿದರು.