ಸಿದ್ದಾಪುರ: ಮದ್ಯ ಸೇವನೆಯಿಂದ ಮನುಷ್ಯನ ದೇಹವನ್ನು ಮಾತ್ರ ಸುಡುವುದಲ್ಲ. ವ್ಯಕ್ತಿತ್ವವನ್ನು ಸುಡುತ್ತದೆ. ವೀರೇಂದ್ರ ಹೆಗ್ಗಡೆ ಅವರು ವ್ಯಸನಮುಕ್ತ ಸಮಾಜ ನಿರ್ಮಾಣಮಾಡಬೇಕೆನ್ನುವುದರಿಂದ ಅನೇಕ ಕಾರ್ಯಕ್ರಮ ಜಾರಿಗೊಳಿಸುತ್ತಿದ್ದು ಅದು ಸಫಲವಾಗುತ್ತಿರುವುದು ಸಹ ಗ್ರಾಮೀಣಾಭಿವೃದ್ಧಿಗೆ ಅನುಕೂಲವಾಗಿದೆ ಎಂದು ಬಿಇಒ ಎಂ.ಎಚ್. ನಾಯ್ಕ ಹೇಳಿದರು.
ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಶಿರಸಿ ಜಿಲ್ಲಾ ಜನಜಾಗೃತಿ ವೇದಿಕೆ ಇವರು ಆಯೋಜಿಸಿದ್ದ ಗಾಂಧಿಜಯಂತಿ ಸಂಭ್ರಮಾಚರಣೆಯ ಗಾಂಧಿ ಸ್ಮತಿ ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿದರು. ಮದ್ಯಮುಕ್ತ ಗ್ರಾಮ ನಮ್ಮದಾಗಬೇಕು. ಹೊಸ ಜೀವನವನ್ನು ನಡೆಸಬೇಕು ಎನ್ನುವ ಪರಿಕಲ್ಪನೆಯೊಂದಿಗೆ ನಡೆಸುತ್ತಿರುವ ಮದ್ಯವರ್ಜನ ಕಾರ್ಯಕ್ರಮ ಇಂದು ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಸ ನಾಯ್ಕ ಕಾನಸೂರು, ಮದ್ಯವರ್ಜನ ಶಿಬಿರಗಳಿಂದ ಜನತೆ ಪ್ರೇರಣೆಗೊಂಡು ಪರಿವರ್ತನೆ ಆಗಿದ್ದಾರೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಾಮು ಕಿಣಿ ದಿಕ್ಸೂಚಿ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಳಿಂಗರಾಜು, ಉಪಾಧ್ಯಕ್ಷೆ ಗೌರಿ ನಾಯ್ಕ, ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ, ವೇದಿಕೆ ಸದಸ್ಯರಾದ ವಿವೇಕ್ ರಾಯ್ಕರ್, ರಮೇಶ ಹಾರ್ಸಿಮನೆ, ಗುರುರಾಜ ಶಾನಭಾಗ, ಲಕ್ಷ್ಮೀ ರಾಜು, ಶಂಕರ ಭಟ್ಟ, ಗಣಪತಿ ಗೌಡ, ಬರಮಪ್ಪ ಗೌಡ, ಶೌರ್ಯ ತಂಡದ ಚಂದ್ರಶೇಖರ, ಮಂಜುನಾಥ ಇತರರಿದ್ದರು.
ಅಣ್ಣಾ ರಮೇಶ ಗೌಡ ಅವರಿಗೆ ಜನಜಾಗೃತಿ ಅಣ್ಣಾ, ನರಸಿಂಹ ಗೌಡ ಹಾಗೂ ವಂಕಟೇಶ ಗೌಡ ಅವರಿಗೆ ಜನಜಾಗೃತಿ ಮಿತ್ರ ಪ್ರಮಾಣಪತ್ರ ನೀಡಲಾಯಿತು. ತಾಲೂಕು ಯೋಜನಾಧಿಕಾರಿ ಗಿರೀಶ ಜಿ.ಪಿ. ಸ್ವಾಗತಿಸಿದರು. ಶಿರಸಿ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಸಮಾವೇಶದ ಹಕ್ಕೋತ್ತಾಯ ಮಂಡಿಸಿದರು. ಯಲ್ಲಾಪುರ ತಾಲೂಕು ಯೋಜನಾಧಿಕಾರಿ ಹನುಮಂತ ಗೌಡ ವಂದಿಸಿದರು. ಉದಯ ಹಾಗೂ ಲಲಿತಾ ಕಾರ್ಯಕ್ರಮ ನಿರ್ವಹಿಸಿದರು.
ಇದಕ್ಕೂ ಪೂರ್ವದಲ್ಲಿ ಪಟ್ಟಣದ ನೆಹರು ಮೈದಾನದಿಂದ ಗಾಂಧಿ ಸ್ಮತಿ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಜಾಥಾವು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶಂಕರಮಠದವರೆಗೆ ಡೊಳ್ಳು ಕುಣಿತದೊಂದಿಗೆ ನಡೆಯಿತು.