ವಿಜಯಪುರ : ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅರ್ಥಹೀನ ಬೀದಿ ಮಾತುಗಳು ಜಿಲ್ಲೆ, ರಾಜ್ಯದ ಜನರಿಗೆ ವಾಕರಿಗೆ ತರಿಸಿದೆ ಎಂದು ಎನ್‌ಸಿಪಿ ಜಿಲ್ಲಾ ಘಟಕದ ಅಧ್ಯಕ್ಷ, ಪಂಚಮಸಾಲಿ ಸಮಾಜದ ಮುಖಂಡ ಬಿ.ಎಂ. ಬಿರಾದಾರ ಮನಗೂಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಯತ್ನಾಳ ಅವರನ್ನು ಮುಂದಾದರೂ ವಿಜಯಪುರ ಕ್ಷೇತ್ರದ ಅಭಿವೃದ್ಧಿ, ಜನರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು. ತಮ್ಮ ವಿರೋಧಿ ರಾಜಕಾರಣಿಗಳನ್ನು ವೈಯಕ್ತಿಕ ನಿಂದನೆ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಅವರು ಸಲಹೆ ನೀಡಿದ್ದಾರೆ.
ಸಚಿವ ಶಿವಾನಂದ ಪಾಟೀಲ ಅವರ ವೈಯಕ್ತಿಕ ವಿಷಯವನ್ನು ಯತ್ನಾಳ ಅವರು ರಾಜಕೀಯಕ್ಕೆ ತಂದು ಅವಾಚ್ಯ ಶಬ್ಧ ಬಳಕೆ ಮಾಡಿರುವುದು ಖಂಡನೀಯ. ಒಂದೇ ಜಾತಿಯ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ ಅಹಿತಕರ ಸಂಘರ್ಷ ಪಂಚಮಸಾಲಿ ಸಮಾಜ, ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಶಿವಾನಂದ ಪಾಟೀಲರು ಒಬ್ಬ ಮುತ್ಸದ್ಧಿ ರಾಜಕಾರಣಿ, ಮೃದು ಸ್ವಭಾವದ ವ್ಯಕ್ತಿತ್ವ, ಚಾಣಕ್ಷ ರಾಜಕೀಯ ನಡೆಯಿಂದ ಜನರ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಬಗ್ಗೆ ಯತ್ನಾಳರು ಅಸಂವಿಧಾನಿಕ ಪದಗಳ ಬಳಕೆ ಮಾಡುತ್ತಿರುವುದು ಖಂಡನಾರ್ಹ ಎಂದು ಬಿ.ಎಂ. ಬಿರಾದಾರ ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳರ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿವಾನಂದ ಪಾಟೀಲ ತಮ್ಮ ನೈತಿಕತೆ ಪ್ರದರ್ಶಿಸಿದ್ದಾರೆ. ಸಚಿವರ ನಿಲುವು ಯೋಗ್ಯವಾಗಿದೆ. ಯತ್ನಾಳ ಅವರಿಗೆ ತಮ್ಮ ಮಾತಿನ ಬಗ್ಗೆ, ಸವಾಲಿನ ಬಗ್ಗೆ ಕಿಂಚಿತ್ತು ಗೌರವ ಇದ್ದರೆ ತಕ್ಷಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸವಾಲು ಸ್ವೀಕರಿಸಬೇಕು. ಇಲ್ಲದಿದ್ದರೆ ಶಿವಾನಂದ ಪಾಟೀಲರಿಗೆ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಮುಂದಿನ ದಿನಗಳಲ್ಲಿ ನಾಲಿಗೆ ಹರಿಬಿಡುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ.
ರಾಜ್ಯ ರಾಜಕಾರಣಕ್ಕೆ ವಿಜಯಪುರ ಇದುವರೆಗೂ ಮೇಲ್ಪಂಕ್ತಿಯಲ್ಲಿದೆ. ಯತ್ನಾಳರ ಇತ್ತೀಚಿನ ನಡೆಯಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ನಾಲಿಗೆ ಹರಿಬಿಡುವುದರಿಂದ ಜನರಿಗೆ, ಕ್ಷೇತ್ರಕ್ಕೆ ಯಾವುದೇ ಲಾಭವಿಲ್ಲ. ಯತ್ನಾಳ ಇದೇ ರೀತಿ ವರ್ತನೆ ಮುಂದುವರಿಸಿದರೆ ಜನ ಬೆನ್ನುಹತ್ತಿ ಹೊಡೆಯುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಯತ್ನಾಳ ಮತ್ತು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನಡೆಯಿಂದ ಪಂಚಮಸಾಲಿ ಸಮಾಜ ಎಂದರೆ ರಾಜ್ಯದಲ್ಲಿ ನಗೆಪಾಟೀಲಿಗೆ ಒಳಗಾಗಿದೆ ಎಂದು ಬಿ.ಎಂ. ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.