ಶಿವಮೊಗ್ಗ: ನಗರದ ಆಲ್ಕೊಳ ವೃತ್ತದ ಬಳಿ ಗ್ರಾನೈಟ್ ಉದ್ಯಮಿಗೆ ಪಿಸ್ತೂಲ್‌ನಿಂದ ಬೆದರಿಸಿದ್ದಲ್ಲದೆ, ಕಾರಿನಲ್ಲಿ ಅಪಹರಣ ಮಾಡಿದ್ದ ಪ್ರಕರಣದಲ್ಲಿ ಬಂಧಿಸಿ ಬೆಂಗಳೂರಿನಿಂದ ಕರೆತರುವಾಗ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆಗೆ ಯತ್ನಿಸಿದ್ದವನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿದೆ.
ಟಿಪ್ಪುನಗರದ ಆಸಿಫ್ ಅಲಿಯಾಸ್ ಸನಾಟ ಆಸಿಫ್ (28) ಶಿಕ್ಷೆಗೆ ಒಳಗಾದವ. ಈತ 2018ರ ಜು.5ರಂದು ಸಂಜೆ ನಗರದ ಸಲೀಂ, ಜಯರಾಮ್, ಜಮೀರ್ ಅಲಿಯಾಸ್ ಬಚ್ಚಾನ ಜತೆ ಸೇರಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಯೂ ಆದ ಹಬೀಬ್ ಎಂಬುವರನ್ನು ಕಾರಿನಲ್ಲಿ ಅಪಹರಿಸಿದ್ದರು. ಬಳಿಕ ವಿನೋಬನಗರ ಬಳಿ ಬಿಟ್ಟು ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಆಸೀಫ್ ತಲೆಮರೆಸಿಕೊಂಡಿದ್ದ.
ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪಿಎಸ್‌ಐ ಬಿ.ಸಿ.ಗಿರೀಶ್ ಮತ್ತು ಸಿಬ್ಬಂದಿ 2018ರ ಜು.15ರಂದು ಬೆಂಗಳೂರಿನಲ್ಲಿ ಆಸೀಫ್‌ನನ್ನು ಬಂಧಿಸಿತ್ತು. ಈ ವೇಳೆ ಚಿತ್ರದುರ್ಗ ಮಾರ್ಗವಾಗಿ ಶಿವಮೊಗ್ಗಕ್ಕೆ ಕರೆತರುವಾಗ ಹೊನ್ನಾಳಿ ರಸ್ತೆಯ ಹೊಳಲೂರು ಗ್ರಾಮದ ಹೊಟ್ಟೆಗುಡ್ಡದ ಬಳಿ ಮೂತ್ರ ವಿಸರ್ಜನೆಗೆಂದು ವಾಹನದಿಂದ ಇಳಿದಿದ್ದ. ಬಳಿಕ ಅಲ್ಲೇ ಬಿದ್ದಿದ್ದ ಕಬ್ಬಿಣದ ರಾಡ್‌ನಿಂದ ಪಿಎಸ್‌ಐ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ. ಹಾಗಾಗಿ ಆತನ ವಿರುದ್ಧ ಕೊಲೆ ಯತ್ನ, ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿಯಾಗಿದ್ದ ಸಿಪಿಐ ಎಂ.ಮಂಜುನಾಥ ಅವರು ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಮಂಜುನಾಥ ನಾಯಕ್ ಅವರು ಆಸೀಫ್ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕಠಿಣ ಶಿಕ್ಷೆ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲನಾದಲ್ಲಿ 6 ತಿಂಗಳು ಹೆಚ್ಚುವರಿ ಸಾಧಾ ಕಾರವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಸುರೇಶ್ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.