ಜಿಲ್ಲೆ

ಸಾಧನೆಯ ಯಶಸ್ಸಿಗೆ ಪರಿಶ್ರಮ ಅಗತ್ಯ

ಕಿರಣ್ ಗೌಡ.ಜಿ

ಕೊಳ್ಳೇಗಾಲ: ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕ. ಆತ್ಮವಿಶ್ವಾಸದಿಂದ ಸತತ ಪ್ರಯತ್ನದಿಂದ ಸಾಧನೆ ಮಾಡಿದರೆ ಯಶಸ್ಸು ದೊರೆಯುತ್ತದೆ ಎಂದು ನಟಿ ಬೇಬಿ ರೇಖಾ ಹೇಳಿದರು.

ಪಟ್ಟಣದ ಜೆಎಸ್‌ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಕಲಿಕೆಯ ಕಡೆಗೆ ತುಡಿತ ವಿರಬೇಕು. ಇಂತಹ ವೇದಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿರುತ್ತದೆ. ವಿದ್ಯಾರ್ಥಿನಿಯರು ಏನಾನ್ನಾದರೂ ಸಾಧಿಸುವ ಛಲ ಹೊಂದಬೇಕು ಎಂದರು.

ಅಂತಾರಾಷ್ಟ್ರೀಯ ಕ್ರೀಡಾಪಟು ಚೈತ್ರಾ ಕುರುಬೂರು ಮಾತನಾಡಿ, ಗ್ರಾಮೀಣ ಪರಿಸರದಲ್ಲಿ ಬೆಳೆದ ತನ್ನನ್ನು ಕ್ರೀಡೆಗೆ ಕಳುಹಿಸುವ ಮೂಲಕ ಬೆಳೆಸಿದ್ದು ನನ್ನ ಪಾಲಕರು. ಬಡತನವನ್ನು ನೆನೆಯುತ್ತಾ ಇದಕ್ಕೆ ಸಾಧನೆಯ ಮೂಲಕ ಉತ್ತರ ಕೊಡಲು ಅಂದೇ ನಿರ್ಧರಿಸಿದ್ದೆ. ವಿಶ್ವಕಪ್ ಖೋಖೋ ಪಂದ್ಯಾವಳಿಗೆ ದಕ್ಷಿಣ ಭಾರತದಿಂದ ಆಯ್ಕೆಯಾದ ಒಬ್ಬಳೇ ಆಟಗಾರ್ತಿ ನಾನು. ಇನ್ನು ಹೆಚ್ಚಿನ ಸಾಧನೆ ಮಾಡುವ ಆಸೆ ಇದೆ ಎಂದು ತಿಳಿಸಿದರು.

ಕಲಾವಿದೆ ಸುಮಾ ರಾಜಕುಮಾರ್, ಚಾಮರಾಜನಗರ ಜಿಲ್ಲೆಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್, ಕಾಲೇಜಿನ ಪ್ರಾಂಶುಪಾಲ ಎನ್.ಮಹದೇವಸ್ವಾಮಿ, ಕಲಾವಿದ ಸಿಎಂ ನರಸಿಂಹಮೂರ್ತಿ, ಅಧ್ಯಾಪಕರು ಮತ್ತು ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದರು.