ಉಡುಪಿ: ಶ್ರೀ ಕ್ಷೇತ್ರ ಪೆರ್ಣಂಕಿಲ ಮಹಾಲಿಂಗೇಶ್ವರ , ಮಹಾಗಣಪತಿ ದೇವಸ್ಥಾನಕ್ಕೆ ಶನಿವಾರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಗಮಿಸಿದ್ದು, ಪೆರ್ಣಂಕಿಲ ಜೋಡುಕಟ್ಟೆಯ ಬಳಿಯಿಂದ ಮಂಗಳವಾದ್ಯ, ಚಂಡೆಯ ನಾದ, ಭಜನಾ ತಂಡಗಳು, ವೇದಘೋಷದ ಮೂಲಕ ಕ್ಷೇತ್ರಕ್ಕೆ ಸ್ವಾಗತಿಸಲಾಯಿತು.
ಸಮಗ್ರ ಜೀಣೋರ್ದ್ಧಾರದ ಭಾಗವಾದ ಕ್ಷೇತ್ರದ ಧ್ವಜಮರವನ್ನು 3 ತಿಂಗಳು ಕೆಸರಿನಲ್ಲಿ ಹದಗೊಳಿಸಲಾಗಿದ್ದು, ಪೇಜಾವರ ಶ್ರೀಗಳು ಪರಿಶುದ್ಧ ತಿಲ ತೈಲ ಸಮರ್ಪಿಸುವುದರೊಂದಿಗೆ ತೈಲಾಧಿವಾಸಕ್ಕೆ ಒಳಪಡಿಸಲಾಯಿತು. ಈ ಸಂದರ್ಭದಲ್ಲಿ ನೂತನವಾಗಿ ಪುನರ್ನಿಮಾರ್ಣಗೊಳ್ಳುತ್ತಿರುವ ಪೇಜಾವರ ಮಠದ ಶಾಖೆಯ ಕಾಮಗಾರಿಯ ಪ್ರಗತಿಯನ್ನು ಶ್ರೀಗಳು ವೀಕ್ಷಿಸಿದರು.
ಸಭಾ ಕಾರ್ಯಕ್ರಮದಲ್ಲಿ ಶ್ರೀವತ್ಸ ಭಟ್ ಮತ್ತು ಹರೀಶ ಸರಳಾಯ ವೇದ ಘೋಷ ಪ್ರಾರ್ಥನೆಗೈದರು. ಜೀಣೋರ್ದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಜೀಣೋರ್ದ್ಧಾರಕ್ಕೆ ಧನಸಹಾಯವಿತ್ತ ದಾನಿಗಳನ್ನು ಶ್ರೀಗಳು ಶಾಲು ಹೊದೆಸಿ ಫಲ ಮಂತ್ರಾಕ್ಷತೆ ನೀಡಿ ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಉದ್ಯಮಿಗಳಾದ ಶ್ರೀಶ ನಾಯಕ್ ಪೆರ್ಣಂಕಿಲ, ವಿರೇಂದ್ರ ಹೆಗ್ಡೆ ದಂಪತಿ, ಸಾಯಿರಾಧಾ ಮನೋಹರ ಶೆಟ್ಟಿ, ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ, ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ವಾಸ್ತುತಂತ್ರಜ್ಞರಾದ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ, ಕ್ಷೇತ್ರದ ತಂತ್ರಿಗಳಾದ ಮಧುಸೂಧನ ತಂತ್ರಿ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್ ಕಾರ್ಯಕ್ರಮ ಸಂಯೋಜಿಸಿದರು. ಉಮೇಶ್ ನಾಯಕ್ ಪೆರ್ಣಂಕಿಲ ನಿರೂಪಿಸಿದರು.