ರಾಯಚೂರು ರಾಜ್ಯ ಸರ್ಕಾರ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಮಾಧ್ಯಮದ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಅನುಮತಿ ನೀಡಿರುವುದು ಖಂಡನೀಯವಾಗಿದೆಂದು ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ರಫೀಕ ಅಹ್ಮದ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಆಂಗ್ಲ ಮಾಧ್ಯಮ ಶಾಲೆಗಳನ್ನು ಹೆಚ್ಚಿಸುತ್ತಾ ಹೋದರೆ ಕನ್ನಡ ಮಾಧ್ಯಮ ಶಾಲೆಗಳು ಉಳಿಯುವುದಾದರು ಹೇಗೆ ? ಈಗ ಬಹುತೇಕ ಕನ್ನಡ ಮಾಧ್ಯಮ ಶಿಕ್ಷಣ ಉಳಿದಿರುವುದು ಸರ್ಕಾರಿ ಶಾಲೆಗಳಲ್ಲಿ ಮಾತ್ರ. ಖಾಸಗಿ ಶಾಲೆಗಳು ಜನರನ್ನು ತಪ್ಪು ದಾರಿಗೆಳೆಯುತ್ತಾ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಮಾತ್ರ ನಡೆಸುತ್ತಿವೆ.
ಕನ್ನಡ ಮಾಧ್ಯಮ ಶಾಲೆ ನಡೆಸುತ್ತೇವೆ ಎಂದು ಅನುಮತಿ ಪಡೆದು ಇಂಗ್ಲೀಷ್ ಮಾಧ್ಯಮ ನಡೆಸುತ್ತಿರುವ ಖಾಸಗಿ ಶಾಲೆಗಳು ಸಾಕಷ್ಟು ಇವೆ. ಆದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸರ್ಕಾರಿ ಶಾಲೆಗಳಲ್ಲಿರುವ ಎಲ್ಕೆಜಿ.ಯಿಂದ ಹತ್ತನೇ ತರಗತಿಯವರೆಗೆ ನಡೆಸುತ್ತಿರುವ ಆಂಗ್ಲ ಮಾಧ್ಯಮ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಬೇಕು ಇಲ್ಲವಾದಲ್ಲಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯಿಂದ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಮಣ್ಣ ಮ್ಯಾದಾರ್, ವೆಂಕಯ್ಯ ಶೆಟ್ಟಿ, ರಾಮಲಿಂಗಪ್ಪ, ತಿಮ್ಮಯ್ಯ, ಬಷೀರ್ ಅಹ್ಮದ್ ಇದ್ದರು.