ಜಿಲ್ಲೆ

ಅಂಕೋಲ-ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಅನುಮತಿ ಬಾಕಿ

ಹುಬ್ಬಳ್ಳಿ: ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕಿದ್ದ ಎಲ್ಲ ಅಡೆತಡೆಗಳು ಮುಗಿದಿದೆ. ಡಿಪಿಆರ್ ಕೂಡ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಅನುಮತಿ ಬಾಕಿ ಉಳಿದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿಯ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಏರ್ಪಡಿಸಿದ್ದ ಕೆಎಸ್‌ಆರ್ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಣಿ ಉದ್ಯಮಿಗಳು 2 ಬಂದರುಗಳನ್ನು ಖಾಸಗಿಯಾಗಿ ನಿರ್ಮಿಸಿಕೊಳ್ಳುವ ಅಭಯ ನೀಡಿದ್ದಾರೆ. ಈ ರೈಲ್ವೆ ಮಾರ್ಗ ಆದರೆ, ಉತ್ತರ ಕರ್ನಾಟಕದ ಗೇಟ್‌ವೇ ಆದಂತಾಗುತ್ತದೆ. ಅನುಮತಿಗಾಗಿ ಕಾಯಲಾಗುತ್ತಿದೆ ಎಂದರು.

ಕರ್ನಾಟಕದಲ್ಲಿ 11 ವಂದೇ ಭಾರತ್ ರೈಲ್ವೆ ಓಡಾಡುತ್ತಿವೆ. ಸ್ವದೇಶಿ ನಿರ್ಮಿತ ಸೆಮಿ-ಹೈಸ್ಪೀಡ್, ಸ್ವಯಂ ಚಾಲಿತ ರೈಲು ಇದು. ರೈಲ್ವೆ ತಯಾರಿಸಲು ಅಗತ್ಯ ಸಾಮಗ್ರಿಗಳನ್ನು ಬೇರೆ ದೇಶಗಳಿಂದ ಮೊದಲು ತರಿಸಲಾಗುತ್ತಿತ್ತು ಎಂದರು.

ರಾಜ್ಯ ಸರ್ಕಾರವು ದಾವಣಗೆರೆ-ತುಮಕೂರು ಮಧ್ಯೆ ರೈಲ್ವೆ ಸಂಚಾರಕ್ಕೆ ಅಗತ್ಯ ಭೂಸ್ವಾಧೀನ ಮಾಡಿಕೊಳ್ಳಬೇಕು. ಇದರಿಂದ ಆ ಭಾಗದ ಜನರು ಬೆಂಗಳೂರು ತಲಪುವ ಸಮಯ ಕಡಿಮೆಯಾಗಲಿದೆ ಎಂದರು.

ಇದೇ ವೇಳೆ ವಿವಿಧ ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶಾಸಕ ಮಹೇಶ ಟೆಂಗಿನಕಾಯಿ, ಉಪಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯರಾದ ಬೀರಪ್ಪ ಖಂಡೇಕರ, ಮಲ್ಲಿಕಾರ್ಜುನ ಗುಂಡೂರ, ತಿಪ್ಪಣ್ಣ ಮಜ್ಜಗಿ, ಡಿಆರ್‌ಎಂ ಬೇಲಾ ಮೀನಾ ಇತರರು ಇದ್ದರು.