ಚನ್ನರಾಯಪಟ್ಟಣ: ನೂತನವಾಗಿ ನಿರ್ಮಿಸುವ ವಸತಿ ಬಡಾವಣೆಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿದರೆ ಮಾತ್ರ ಪುರಸಭೆಯಿಂದ ಅನುಮತಿ ನೀಡಲಾಗುವುದೆಂದು ಶಾಸಕ ಸಿ.ಎ.ಬಾಲಕೃಷ್ಣ ಹೇಳಿದರು.
ಪಟ್ಟಣದ ರೇಣುಕಾ ನಗರದಲ್ಲಿ ಅಲ್ಪಸಂಖ್ಯಾತರ ಕೋಶದ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಪಟ್ಟಣದಲ್ಲಿ ಖಾಸಗಿಯವರು ಅಭಿವೃದ್ಧಿಪಡಿಸಿದ ಬಹುತೇಕ ಬಡಾವಣೆಗಳಲ್ಲಿ ಮೂಲಸೌಲಭ್ಯಗಳು ಇನ್ನೂ ಮರೀಚಿಕೆಯಾಗಿವೆ. ಸಮರ್ಪಕ ರಸ್ತೆ, ನೀರು, ಚರಂಡಿ, ತ್ಯಾಜ್ಯ ನಿರ್ವಹಣೆ, ಬೀದಿ ದೀಪ ಮೊದಲಾದವುಗಳನ್ನು ವ್ಯವಸ್ಥಿತವಾಗಿ ಕಲ್ಪಿಸುವ ಕಾರ್ಯವು ನಡೆದಿಲ್ಲ. ಪಟ್ಟಣದಲ್ಲಿ ವಸತಿ ಪ್ರದೇಶವು ವಿಸ್ತಾರವಾಗಿ ಬೆಳೆಯುತ್ತಿದ್ದು, ಮೂಲ ಸೌಕರ್ಯಗಳಿರುವ ಅಧಿಕೃತ ವಸತಿ ಬೆಳವಣಿಗೆಗೆ ಮಾತ್ರ ಪುರಸಭೆಯಿಂದ ಅನುಮತಿ ನೀಡಲಾಗುತ್ತದೆ. ಜಿಲ್ಲೆ ಹೊರತುಪಡಿಸಿದರೆ ತಾಲೂಕು ಅತಿ ವೇಗವಾಗಿ ಬೆಳೆಯುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಪಟ್ಟಣದಾದ್ಯಂತ ವಿದ್ಯುತ್ ಪೂರೈಕೆಯ ಭೂಗತ ಕೇಬಲ್ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಅನುಮೋದನೆ ಸಿಗುವ ನಿರೀಕ್ಷೆ ಇದೆ ಎಂದರು.
ಪಟ್ಟಣದಾದ್ಯಂತ ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜಿಗೆ ಅಗತ್ಯ ಕ್ರಮ ಕೈಗೊಂಡಿದ್ದು, ಶೇ. 80ರಷ್ಟು ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು. ಬಾಕಿ ಉಳಿದಿರುವ ಸಮುದಾಯ ಭವನ ನವೀಕರಣ ಕಾಮಗಾರಿಗೆ ಮುಂದಿನ ದಿನಗಳಲ್ಲಿ ಆದ್ಯತೆ ನೀಡಲಾಗುವುದು. ರೇಣುಕ ನಗರದಲ್ಲಿ ಪೌರಕಾರ್ಮಿಕರೇ ಹೆಚ್ಚಾಗಿ ವಾಸಿಸುತ್ತಿದ್ದು, ಪೌರಕಾರ್ಮಿಕರಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ದೊಡ್ಡಮ್ಮ ದೇವಿಯ ದೇವಸ್ಥಾನದ ನಿರ್ಮಾಣಕ್ಕೆ ಅನುದಾನದ ಲಭ್ಯತೆ ಮೇಲೆ ಮುಂದಿನ ದಿನಗಳಲ್ಲಿ ಸಹಕಾರ ನೀಡಲಾಗುವುದು. ನೂತನವಾಗಿ ನಿರ್ಮಾಣಗೊಂಡಿರುವ ಈ ರಸ್ತೆಯು ಬಿ.ಎಂ.ರಸ್ತೆಯಿಂದ ಬಾಗೂರು ರಸ್ತೆಗೆ ಸಂಪರ್ಕಿಸುವ ರಸ್ತೆಯಾಗಿದ್ದು ಈ ಬಡಾವಣೆಗಳ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಸಿ.ಎನ್.ಮೋಹನ್, ಉಪಾಧ್ಯಕ್ಷೆ ಕವಿತಾ ರಾಜು, ಪುರಸಭಾ ಸದಸ್ಯರಾದ ಯೋಗೇಶ್ ಧರಣೇಶ್, ರಾಣಿಕೃಷ್ಣ, ರಾಮು, ಇಲಿಯಾಸ್, ಟಿಎಟಿಸಿ ಎಂಎಸ್‌ನ ಅಧ್ಯಕ್ಷ ಅನಿಲ್ ಮರಗೂರು, ಮುಖಂಡರಾದ ನಾಗರಾಜು ಗಾರೆಕೃಷ್ಣ, ರಾಜು, ಹರೀಶ್ ಇತರರಿದ್ದರು.