ವಿಜಯವಾಣಿ ಸುದ್ದಿಜಾಲ ಕಾರವಾರ
ಇಲ್ಲಿನ ಬೈತಖೋಲ್ ಬಂದರು ಪ್ರದೇಶದಲ್ಲಿರುವ ಸುಮಾರು 60 ಸಾವಿರ ಮೆಟ್ರಿಕ್ ಟನ್ ಅದಿರು ವಿಲೇವಾರಿಗೆ ಕಾರವಾರ ಜೆಎಂಎಫ್ಸಿ ನ್ಯಾಯಾಲಯ ಅನುಮತಿ ನೀಡಿದೆ.
ಇದರಿಂದ ಬಂದರು, ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಹಾಗೂ ಶನಿವಾರ ಅದಿರು ಗುಡ್ಡೆಗಳ ಜಂಟಿ ಸಮೀಕ್ಷೆ ನಡೆಸಿದರು. ಅದಿರಿನ ಗುಣಮಟ್ಟದ ಮೌಲ್ಯಮಾಪನವನ್ನು ಸುಪ್ರೀಂ ಕೋರ್ಟ್ ನೇಮಿಸಿರುವ ಉನ್ನತಾಧಿಕಾರಿ ಸಮಿತಿಗೆ ಸಲ್ಲಿಸುವರು. ಅಲ್ಲಿಂದ ಅನುಮತಿ ಬಂದ ನಂತರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟು 11 ಕಂಪನಿಗೆ ಸೇರಿದ ಅದಿರು ಗುಡ್ಡೆಗಳು ಕಾರವಾರದಲ್ಲಿದ್ದು, ಇದರಲ್ಲಿ 5 ಕಂಪನಿಯ ಪ್ರತಿನಿಧಿಗಳು ಮಾತ್ರ ಅದಿರಿನ ಮೌಲ್ಯಮಾಪನ ಸಂದರ್ಭದಲ್ಲಿ ಹಾಜರಿದ್ದರು ಎನ್ನಲಾಗಿದೆ.
ಬೇಲೆಕೇರಿಗೆ ಇನ್ನೂ ಅನುಮತಿ ಇಲ್ಲ: ಬೇಲೆಕೇರಿ ಬಂದರಿನಲ್ಲಿ ಒಟ್ಟ 11 ಕಂಪನಿಗಳಿಗೆ ಸೇರಿದ ಸುಮಾರು 250 ಕೋಟಿ ರೂ. ಮೌಲ್ಯದ 8,05,991 ಮೆಟ್ರಿಕ್ ಟನ್ ಅದಿರನ್ನು ವಶಕ್ಕೆ ಪಡೆಯಲಾಗಿತ್ತು. ಇದರಲ್ಲಿ ಸುಮಾರು 150 ಕೋಟಿ ರೂ. ಮೌಲ್ಯದ 5 ಲಕ್ಷ ಮೆಟ್ರಿಕ್ ಟನ್ ಕಳ್ಳಸಾಗಣೆಯಾಗಿದೆ ಎಂಬ ದೂರಿತ್ತು. ಉಳಿದ ಸುಮಾರು 3 ಲಕ್ಷ ಮೆಟ್ರಿಕ್ ಟನ್ ಅದಿರು ಕಳೆದ 10 ವರ್ಷಗಳಿಂದ ಬಂದರಿನಲ್ಲೇ ಕೊಳೆಯುತ್ತಿದೆ. ಬೇಲೆಕೇರಿಯಲ್ಲಿರುವ ಅದಿರನ್ನು ವಿಲೇವಾರಿ ಮಾಡಲು ಇನ್ನೂ ಅಂಕೋಲಾ ಜೆಎಂಎಫ್ಸಿ ನ್ಯಾಯಾಲಯ ಅನುಮತಿ ನೀಡಿಲ್ಲ.
ಅದಿರಿನ ಹಿನ್ನೆಲೆ: ಬಳ್ಳಾರಿಯಿಂದ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಅದಿರು ತೆಗೆದು ಚೀನಾಕ್ಕೆ ಸಾಗಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾರವಾರ ಡಿಎಫ್ಒ ಆರ್. ಗೋಕುಲ್ ನೇತೃತ್ವದ ತಂಡ 2010ರ ಮಾರ್ಚ್ 20ರಂದು ಬೇಲೆಕೇರಿಯಲ್ಲಿ 8.05 ಲಕ್ಷ ಹಾಗ ಕಾರವಾರದಲ್ಲಿ 60 ಸಾವಿರ ಟನ್ ಅದಿರನ್ನು ವಶಕ್ಕೆ ಪಡೆದು, ಬಂದರು ಇಲಾಖೆಯ ಸಂರಕ್ಷಣೆಯಲ್ಲಿಟ್ಟಿತ್ತು. ಆದರೆ, ಅದರಲ್ಲಿ ಒಂದಿಷ್ಟು ಅದಿರು ನಾಪತ್ತೆಯಾಗಿದೆ ಎಂದು ಜೂನ್ 8 ರಂದು ಕಾರವಾರ ಹಾಗೂ ಅಂಕೋಲಾ ಪೊಲೀಸ್ ಠಾಣೆಗಳಲ್ಲಿ ಅರಣ್ಯ ಇಲಾಖೆ ದೂರು ದಾಖಲಿಸಿತ್ತು. ಅಕ್ರಮ ಅದಿರು ಕಳ್ಳಸಾಗಣೆ ಸಂಬಂಧ ಸಿಐಡಿ, ಸಿಬಿಐ ವಿಚಾರಣೆ ನಡೆಸಿ, ಕೈಬಿಟ್ಟಿವೆ. ಇದುವರೆಗೂ ಈ ಸಂಬಂಧ ಯಾವುದೇ ಅಂತಿಮ ತೀರ್ಪು ಹೊರ ಬಿದ್ದಿಲ್ಲ. ಇದರ ನಡುವೆ ಈ ಅದಿರು ಪ್ರತಿ ಮಳೆಗಾಲದಲ್ಲಿ ಕರಗುತ್ತಿದೆ. ಗುಣಮಟ್ಟ ಕುಸಿಯುತ್ತಿದೆ. ಈ ಹಿಂದೆ ಕಾರವಾರ ಹಾಗೂ ಅಂಕೋಲಾ ಬೇಲೆಕೇರಿ ಬಂದರಿನಲ್ಲಿ ದಾಸ್ತಾನಿದ್ದ ಅದಿರನ್ನು ಹರಾಜು ಹಾಕಲು ಸಿಬಿಐ ವಿಶೇಷ ನ್ಯಾಯಾಲಯ ಅರಣ್ಯ ಇಲಾಖೆಗೆ ಅನುಮತಿ ನೀಡಿತ್ತು. ಆದರೆ, ಹರಾಜಿಗೆ ಅದಿರು ಕಂಪನಿಗಳು ಆಕ್ಷೇಪಣೆ ಸಲ್ಲಿಸಿದ್ದರಿಂದ ಈ ಪ್ರಕ್ರಿಯೆ ಅರ್ಧಕ್ಕೇ ನಿಂತಿತ್ತು.
ಕಾರವಾರದ ಮಾನ್ಯ ಜೆಎಂಎಫ್ಸಿ ನ್ಯಾಯಾಲಯವು ಅದಿರು ಹರಾಜಿಗೆ ಅನುಮತಿ ನೀಡಿದೆ. ಅದರಂತೆ ಪ್ರಕ್ರಿಯೆ ನಡೆಸಲಾಗಿದೆ. ಬೇಲೆಕೇರಿ ಬಂದರಿನ ಅದಿರು ಹರಾಜಿಗೆ ಇನ್ನೂ ಅಂಕೋಲಾ ನ್ಯಾಯಾಲಯದಿಂದ ಅನುಮತಿ ದೊರೆಯಬೇಕಿದೆ. | ವಸಂತ ರೆಡ್ಡಿ, ಡಿಎಫ್ಒ, ಕಾರವಾರ