ಮರಳಗಾಲ ಗ್ರಾಮ ಹೊರವಲಯದ ಗೋಮಾಳದ ಭೂಮಿಯಲ್ಲಿ ಸೋಮವಾರ ಬಹುಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿ ಪೂಜೆ ನೆರವೇರಿಸಿದರು. ಮನ್ಮುಲ್ ಅಧ್ಯಕ್ಷ ಬಿ.ಬೋರೇಗೌಡ, ಟಿ.ಎಂ.ಹೊಸೂರು ಗ್ರಾಪಂ ಅಧ್ಯಕ್ಷ ಶಿವಮೂರ್ತಿ, ತಡಗವಾಡಿ ಯತೀಶ್ ಇದ್ದರು. 
ಜಿಲ್ಲೆ

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

ಲೋಕೇಶ್ ಮನು. ಡಿ

ಶ್ರೀರಂಗಪಟ್ಟಣ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಶಮನಗೊಳಿಸಲು ಜಲಜೀವನ ಮಿಷನ್ ಯೋಜನೆಯಡಿ 58.5 ಕೋಟಿ ರೂ. ವೆಚ್ಚದಲ್ಲಿ ನೀರು ಸರಬರಾಜು ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮಾಹಿತಿ ನೀಡಿದರು.


ತಾಲೂಕಿನ ಮರಳಗಾಲ ಗ್ರಾಮ ಹೊರವಲಯದ ಗೋಮಾಳದ ಭೂಮಿಯಲ್ಲಿ ಜಲಧಾರೆ ಯೋಜನೆಯಡಿ ಉದ್ದೇಶಿತ ಬಹುಗ್ರಾಮ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಬಳಿಕ ಮಾತನಾಡಿದರು.
ತಾಲೂಕಿನ ದರಸಗುಪ್ಪೆ, ಬಲ್ಲೇನಹಳ್ಳಿ, ಕಿರಂಗೂರು, ಕೆ.ಶೆಟ್ಟಹಳ್ಳಿ, ಸಬ್ಬನಕುಪ್ಪೆ, ಟಿ.ಎಂ.ಹೊಸೂರು, ಮುಂಡಗದೊರೆ, ಅರಕೆರೆ, ಕೊಡಿಯಾಲ, ತಡಗವಾಡಿ ಸೇರಿದಂತೆ ಒಟ್ಟು 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ 56 ಹಳ್ಳಿಗಳಿಗೆ ಕಾವೇರಿ ಎಡದಂಡೆಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಘಟಕ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣ ಕುಡಿಯುವ ನೀರು ಇಲಾಖೆಯ ಶ್ರೀರಂಗಪಟ್ಟಣ ಉಪವಿಭಾಗದ ವತಿಯಿಂದ ಕಾಮಗಾರಿ ನಡೆಸಲಾಗುತ್ತಿದೆ. ಬೆಂಗಳೂರು ಮೂಲದ ಗುತ್ತಿಗೆದಾರರು ಟೆಂಡರ್ ಪಡೆದಿದ್ದು, ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ನಡೆವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿ ತಾಕೀತು ಮಾಡಿದ್ದೇನೆ ಎಂದರು.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳ ಮೂಲಕ ಪ್ರಗತಿದಾಯಕ ಹೆಜ್ಜೆ ಇಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಸಾಕಷ್ಟು ಸಹಕಾರ ನೀಡುತ್ತಿದ್ದು, ಸಾಧ್ಯವಾದಷ್ಟು ಜನರ ಶ್ರೇಯೋಭಿದ್ಧಿಗೆ ನೆರವಾಗುವೆ ಎಂದರು.

ಮನ್ಮುಲ್ ಅಧ್ಯಕ್ಷ ಬಿ.ಬೋರೆಗೌಡ, ಟಿ.ಎಂ.ಹೊಸೂರು ಗ್ರಾಮ ಪಂಚಾಯಿತಿ ಶಿವಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ವೇಣು, ಲೋಕೋಪಯೋಗಿ ಇಲಾಖೆ ಎಇಇ ರಾಮಕೃಷ್ಣೇಗೌಡ, ಗುತ್ತಿಗೆದಾರ ಸುಧೀರ್ ನಾಯ್ಡು, ಮುಖಂಡರಾದ ತಡಗವಾಡಿ ಯತೀಶ್, ಸಂದೇಶ್ ಇತರರು ಇದ್ದರು.