ಗೌರಿಬಿದನೂರು: ಯಾವುದೇ ಶಾಶ್ವತ ನದಿ, ನಾಲೆಗಳಿಲ್ಲದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಆರ್. ಲಕ್ಷ್ಮೀನಾರಾಯಣ್ ಆಗ್ರಹಿಸಿದರು.
ನೇತಾಜಿ ಯುವಕ ಸಂಘದ ವತಿಯಿಂದ ನಗರದ ಸಂಘದ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸದಿದ್ದಲ್ಲಿ ಭವಿಷ್ಯದಲ್ಲಿ ಮರಳುಗಾಡಾಗುವುದು ಖಚಿತ. ಈ ನಿಟ್ಟಿನಲ್ಲಿ ಸಾಕಷ್ಟು ಹೋರಾಟ ನಡೆಸಿದರೂ ಆಳುವ ಸರ್ಕಾರಗಳು ವಿಳಂಬ ಧೋರಣೆ ಅನುಸರಿಸುತ್ತಿವೆ. ನೀರಾವರಿ ವಿಚಾರದಲ್ಲಿ ಗುರಿ ಮುಟ್ಟುವವರೆಗೂ ಕೋಲಾರ, ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ಜನ ನಿರಂತರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಅನ್ನದಾತನ ಕುರಿತು ಸ್ವರಚಿತ ಕವನ ವಾಚಿಸಿದರು.
ಜಿಪಂ ಮಾಜಿ ಸದಸ್ಯ ಪಿ.ಎನ್.ಪ್ರಕಾಶ್ ಮಾತನಾಡಿ, ಲಕ್ಷ್ಮೀನಾರಾಯಣ್ ಅವರು, ವಕೀಲ ವೃತ್ತಿ ಜತೆಗೆ ರೈತಪರ, ನೀರಾವರಿ, ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಗುರುತಿಸಿ ಗೌರವಿಸುತ್ತಿರುವುದು ಸಂಘಕ್ಕೆ ಹೆಮ್ಮೆಯ ವಿಷಯ ಎಂದರು.
ಸಂಘದ ಅಧ್ಯಕ್ಷ ಎ.ಅಶೋಕ್, ಉಪಾಧ್ಯಕ್ಷ ರಾಜೇಶ್, ಕಾರ್ಯದರ್ಶಿ ಎನ್.ವಿ.ಗೌರೀಶ್, ನೇತಾಜಿ ಫೌಂಡೇಶನ್ ಅಧ್ಯಕ್ಷ ಮಂಚೇನಹಳ್ಳಿ ಪ್ರಕಾಶ್, ತಾಪಂ ಮಾಜಿ ಸದಸ್ಯ ಮೋಹನ್, ಜಿ. ಕೊತ್ತೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಈರೇಗೌಡ, ಸಂಘದ ಸದಸ್ಯ ರವಿಕುಮಾರ್ ಮತ್ತು ತೀರ್ಥ ಸಂಸ್ಥೆ ಅಧ್ಯಕ್ಷ ಡಾ.ಕೆ.ವಿ.ಪ್ರಕಾಶ್ ಉಪಸ್ಥಿತರಿದ್ದರು.