ಮುಧೋಳ: ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ನನ್ನ ಹಾಗೂ ನಗರದ ಜನತೆಯ ಬಹುದಿನದ ಆಸೆಯಾಗಿದೆ. ಈ ಯೋಜನೆಯ ರೂಪರೇಷೆ ಈಗ ಹಣಕಾಸು ಇಲಾಖೆ ಮುಂದಿದ್ದು, ತಿಂಗಳೊಳಗೆ ಕೃಷ್ಣಾ ನದಿ ದಡದ ಗುಳಬಾಳದಿಂದ ಮುಧೋಳಕ್ಕೆ ನೀರು ಸರಬರಾಜು ಮಾಡುವ ಯೋಜನೆ ಅನುಷ್ಠಾನಕ್ಕೆ ಚಾಲನೆ ದೊರೆಯಲಿದೆ ಎಂದು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಮಂಗಳವಾರ ನಗರದ ರನ್ನ ಕ್ರೀಡಾಂಗದಲ್ಲಿ ಒಂದು ಕೋಟಿ ರೂ. ವೆಚ್ಚದ ರನ್ನಿಂಗ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ನಾನು ಶಾಸಕ ಹಾಗೂ ಎಪಿಎಂಸಿ ಮಂತ್ರಿಯಾದಾಗ ಸಾಕಷ್ಟು ಅಭಿವದ್ಧಿ ಕಾರ್ಯಗಳನ್ನು ಮಾಡಿರುವೆ. ಇಪ್ಪತ್ತು ವರ್ಷ ಸೋಲಾಗಿದ್ದು, ಈಗ ನಿಮ್ಮ ಆಶೀರ್ವಾದದ ಬಲದಿಂದ ಮತ್ತೆ ಮಂತ್ರಿಯಾಗಿದ್ದೇನೆ. ಬಹುದಿನದ ಬೇಡಿಕೆಯಾದ ವಾಕಿಂಗ್ ಟ್ರಾೃಕ್‌ಗೆ ಒಂದು ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಮೈದಾನದಲ್ಲಿ ಶೌಚಗೃಹ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಒಳಾಂಗಣ ಕ್ರೀಡಾಂಗಣ, ಈಜುಕೊಳ ಸೇರಿ ಇತರ ಕಾಮಗಾರಿ ಹಂತ ಹಂತವಾಗಿ ಮುಂದುವರಿಯುತ್ತವೆ. ತಿಂಗಳಲ್ಲಿ ಹಾಳಾಗಿರುವ ಎಲ್ಲ ಜಿಮ್‌ಗಳನ್ನು ಹೊಸದಾಗಿ ಮಾಡಲಾಗುವುದು ಎಂದು ಹೇಳಿದರು.
ನಮ್ಮ ರನ್ನನ ಊರನ್ನು ರಾಷ್ಟ್ರಮಟ್ಟದಲ್ಲಿ ಹೆಸರು ತರುತ್ತಿರುವ 15 ಮಲ್ಲರು ದಸರಾ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದು, ಅವರಿಗಾಗಿ ಹೊಸ ಮ್ಯಾಟ್ ಖರೀದಿ ಮಾಡಲಾಗುವುದು. ಅವರಿಗೆ ಪ್ರೋತ್ಸಾಹ ನೀಡುವುದರಿಂದ ಹೊಸ ಕ್ರೀಡಾಪಟುಗಳು ಹುಟ್ಟಿಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರದ ವಿವಿಧೆಡೆ ಸ್ಮಶಾನದ ಸೌಲಭ್ಯ ಅಗತ್ಯವಿದೆ. ಕೂಡಲೇ ನಾಲ್ಕು ದಿಕ್ಕಿಗೆ ಒಂದೊಂದು ಸ್ಮಶಾನ ಇರುವಂತೆ ವ್ಯವಸ್ಥೆ ಮಾಡಲಾಗುವುದು. ಜತೆಗೆ ವಿದ್ಯುತ್ ಚಿತಾಗಾರವನ್ನು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಉಪಾಧ್ಯಕ್ಷ ಎಂ.ಎಂ.ಬಾಗವಾನ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಶಿವಾನಂದ ಉದಪುಡಿ, ಡಾ.ಶಿವಾನಂದ ಕುಬಸದ, ಉದಯಸಿಂಗ್ ಪಡತಾರೆ, ಸಿದ್ದು ಸೂರ್ಯವಂಶಿ, ವೆಂಕಣ್ಣ ಗಿಡಪ್ಪನವರ, ರಾಜು ಬಾಗವಾನ, ನಾರಾಯಣ ಹವಾಲ್ದಾರ, ಗೋವಿಂದಪ್ಪ ಗುಜ್ಜನವರ ಇತರರು ಇದ್ದರು.