ಚಿತ್ರದುರ್ಗ: ರಂಗಭೂಮಿಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಅನೇಕ ಚೈತನ್ಯಗಳು ನಮ್ಮ ಕಣ್ಣ ಮುಂದಿವೆ. ಅಂತಹ ಅದಮ್ಯ ಚೇತನಗಳ ಬಗ್ಗೆ ಹಾಗೂ ರಂಗ ಕಲೆ ಕುರಿತು ಮಕ್ಕಳಿಗೆ ತಿಳಿಸಿದರೆ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಗತಿಪರ ಚಿಂತಕ ಡಾ.ಮಲ್ಲಿಕಾರ್ಜುನಪ್ಪ ಹೇಳಿದರು.
ನಗರದ ಹೇಮರೆಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಶನಿವಾರ ರಂಗಸೌರಭ ಕಲಾ ಸಂಘ, ಜಿಲ್ಲಾ ಕಸಾಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ನೀನಾಸಂ ಕೆ.ವಿ.ಸುಬ್ಬಣ್ಣ ಹಾಗೂ ಡಾ.ರಾಮಚಂದ್ರ ನಾಯಕ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ, ಅಭಿನಯ, ಕಲೆ ಇತ್ತೀಚೆಗೆ ಕಣ್ಮರೆಯಾಗುತ್ತಿವೆ. ಮಕ್ಕಳಿಗೆ ಇದರ ಬಗ್ಗೆ ಪರಿಚಯಿಸಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿ ನಾಟಕಗಳು ತನ್ನದೇ ಆದ ಪ್ರಭಾವ ಬೀರುತ್ತವೆ ಎಂದು ತಿಳಿಸಿದರು.
ಶಿಕ್ಷಕರು ನಾಟಕ, ಅಭಿನಯ, ಕಲೆ ರೂಢಿಸಿಕೊಂಡರೆ ಮಕ್ಕಳಿಗೆ ವಿಷಯವನ್ನು ವಿಭಿನ್ನವಾಗಿ ಅರ್ಥೈಸಲು ಸಾಧ್ಯವಿದೆ. ಸಮಾಜವನ್ನು ರೂಪಿಸುವ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ರಂಗಭೂಮಿ ಬಗ್ಗೆ ಪ್ರಶಿಕ್ಷಣಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಹಿರಿಯ ಪತ್ರಕರ್ತ ಉಜ್ಜಿನಪ್ಪ ಮಾತನಾಡಿ, ಹೆಗ್ಗೋಡು ಎಂಬ ಚಿಕ್ಕಹಳ್ಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಸುಬ್ಬಣ್ಣ ಅವರ ಅವಿರತ ಶ್ರಮವೇ ಕಾರಣ. ಏಷ್ಯಾದಲ್ಲಿ ಅತ್ಯುತ್ತಮ ಪ್ರಶಸ್ತಿ ಮ್ಯಾಗ್ಸೆಸೆ ಪ್ರಶಸ್ತಿ, ಕಾಳಿದಾಸ ಸಮ್ಮಾನ ಪ್ರಶಸ್ತಿ ಅವರ ಬದ್ಧತೆಗೆ ದೊರಕಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಸಂಘಟನಾ ಕಾರ್ಯದರ್ಶಿ ವಿ.ಧನಂಜಯ, ಗೌರವ ಕೋಶಾಧ್ಯಕ್ಷ ಚೌಳೂರು ಲೋಕೇಶ್, ಹಿರಿಯ ಕಲಾವಿದ ಜಂಬುನಾಥ, ರಂಗಸೌರಭ ಕಲಾ ಸಂಘದ ಕೆ.ಪಿ.ಎಂ.ಗಣೇಶಯ್ಯ, ಮುಖ್ಯಶಿಕ್ಷಕ ಸಿ.ರಂಗಾ ನಾಯ್ಕ, ಕಲಾವಿದ ಎಂ.ಕೆ.ಹರೀಶ್, ಪೊಲೀಸ್ ಮನು, ಗಾಯಕ ಗಂಗಾಧರ, ಹಿಮಂತರಾಜ್, ಮೈಲಾರಿ ಇತರರಿದ್ದರು.