ವಿಜಯವಾಣಿ ಸುದ್ದಿಜಾಲ ನೆಲಮಂಗಲ
ವ್ಯಕ್ತಿಯನ್ನು ಶಕ್ತಿಯನ್ನಾಗಿ ಪರಿವರ್ತಿಸಬಲ್ಲ ಸಾಮರ್ಥ್ಯ ಕಲೆಗಳಿಗಿದೆ ಎಂದು ಸಾಹಿತಿ ಮಣ್ಣೆಮೋಹನ್ ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಂಗಶಿಕ್ಷಣ ಕೇಂದ್ರದಿಂದ ಹಮ್ಮಿಕೊಂಡಿದ್ದ ಕಾರ್ತಿಕ ರಂಗ ಸಂಭ್ರಮ-2023 ರಲ್ಲಿ ರಂಗಗೀತೆ, ನೃತ್ಯ ಹಾಗೂ ಎರಡು ಹೊಸ ನಾಟಕಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕರುನಾಡು ದೇಶದಲ್ಲಿ ಶಾಶ್ವತವಾಗಿ ಉಳಿಯಬಲ್ಲ ಸಾಂಸ್ಕೃತಿಕ ಕೊಡುಗೆ ನೀಡಬೇಕಿದೆ. ಸಂಗೀತ, ಸಾಹಿತ್ಯ, ನೃತ್ಯ, ನಾಟಕದಂತಹ ಕಲೆಗಳು ಮನುಷ್ಯನನ್ನು ಕ್ರಿಯಾಶೀಲವಾಗಿರಿಸಲು ಸಹಕಾರಿಯಾಗಿವೆ. ಎಲ್ಲರೂ ವೃತ್ತಿ ಜೀವನದ ಜತೆಗೆ ಪ್ರವೃತ್ತಿಯಾಗಿ ಸಾಂಸ್ಕೃತಿಕ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಭಾಗದ ಬಹುತೇಕ ಕಲಾವಿದರು ರಾಷ್ಟ್ರಮಟ್ಟದಲ್ಲೂ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆದರೆ ರಾಜ್ಯ ರಾಜಧಾನಿಗೆ ಸಮೀಪವಿರುವ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ರಂಗಮಂದಿರ ಇಲ್ಲದಿರುವುದು ಬೇಸರದ ಸಂಗತಿ ಎಂದರು.
ತಾಲೂಕು ಕಲಾವಿದರ ಬಳಗದ ಅಧ್ಯಕ್ಷ ಜಿ. ಗಂಗರಾಜು ಮಾತನಾಡಿ, ಕಲಿತ ಕಲೆ, ಪಡೆದ ಜ್ಞಾನ ಮಾತ್ರ ಶಾಶ್ವತವಾಗಿ ಉಳಿಯಲಿದೆ. ಕಲಾವಿದರ, ಪ್ರೇಕ್ಷಕರ ಜೀವನ ಬದಲಿಸಬಲ್ಲ ಶಕ್ತಿ ರಂಗಕಲೆಗಿದೆ ಎಂದರು.