ಚಿಕ್ಕಬಳ್ಳಾಪುರ: ಪೂರ್ಣಚಂದ್ರ ತೇಜಸ್ವಿ ಮತ್ತು ಬಾನು ಮುಸ್ತಾಕ್ ರಚನೆಯ ಮಾಯಾಮೃಗ, ಎದೆಯ ಹಣತೆ ನಾಟಕಗಳ ಆಕರ್ಷಕ ಪ್ರದರ್ಶನವು ಮೆಚ್ಚುಗೆಗೆ ಪಾತ್ರವಾಯಿತು.
ಇಡಗೂರು ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಹೆಗ್ಗೋಡಿನ ಸತ್ಯಶೋಧನಾ ರಂಗ ಸಮುದಾಯದ ಜನಮನದಾಟ ತಂಡವು ಗೌರಿಬಿದನೂರು ನಗರದ ಡಾ.ಎಚ್.ಎನ್ ಕಲಾಭವನದಲ್ಲಿ ನಾಟಕ ಪ್ರದರ್ಶನವನ್ನು ಕೈಗೊಂಡಿತ್ತು.
ತೇಜಸ್ವಿಯವರ ಮಾಯಾಮೃಗದ ನಾಟಕದಲ್ಲಿ ಅಸ್ತಿತ್ವ ಮತ್ತು ಭ್ರಮೆಯ ನಡುವಿನ ಎಳೆಯ ಸೊಗಸಾದ ಚಿತ್ರಣ, ಭೂತಗಳ ಹುಡುಕಾಟಕ್ಕೆ ಸ್ಮಶಾನಕ್ಕೆ ಹೋಗಿ ಇಬ್ಬರು ಸ್ನೇಹಿತರು ಎದುರಿಸುವ ವಿಚಿತ್ರ ಘಟನೆಗಳ ಕಥಾವಸ್ತುವನ್ನು ಬಹಳ ಅರ್ಥಪೂರ್ಣವಾಗಿ ರಂಗದ ಮೇಲೆ ತರಲಾಯಿತು. ಮೌಢ್ಯ ಮತ್ತು ಕಂದಾಚಾರಗಳನ್ನು ಧಿಕ್ಕರಿಸಲು ಪ್ರೇರೇಪಿಸಿತು. ಭಾನು ಮುಸ್ತಾಕ್ ಅವರ ಎದೆಯ ಹಣತೆ ಕಥೆಯ ನಾಟಕದಲ್ಲಿ ಹೆಣ್ಣಿನ ದುರಂತಗಳು, ಸ್ತ್ರೀ ಪಾತ್ರಧಾರಿ ಮೆಹರುನ್ ಅನುಭವಿಸುವ ನೋವು ಮತ್ತು ಅನ್ಯಾಯವನ್ನು ಎದುರಿಸುವ ಕಥಾ ನಿರೂಪಣೆ ರೋಮಾಂಚನಕಾರಿಯಾಗಿತ್ತು. ಮುಸ್ಲಿಂ ಕುಟುಂಬದ ಮಹಿಳೆಯೊಬ್ಬರು ಅನುಭವಿಸುವ ತೊಳಲಾಟ ಮತ್ತು ವೇದನೆ ನೋಡುಗರಲ್ಲಿ ಕಣ್ಣೀರು ತರಿಸುವಂತಿತ್ತು.
ಎಚ್.ಎನ್.ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ, ವೈದ್ಯ ಎಚ್.ಎಸ್.ಶಶಿಧರ್, ವಕೀಲ ನರೇಂದ್ರ, ಹೋರಾಟಗಾರ ಬಾಲಾಜಿ ಸೇರಿದಂತೆ ಅಪಾರ ಬಳಗವು ನಾಟಕ ಪ್ರದರ್ಶನವನ್ನು ಕಣ್ತುಂಬಿಕೊಂಡಿತು.