ಹುಣಸೂರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಕೇರ್ ಟೇಕರ್‌ಗಳು ಪಾಲ್ಗೊಂಡಿದ್ದರು. 
ಜಿಲ್ಲೆ

ಮಾತೃ ಹೃದಯದೊಂದಿಗೆ ಕರ್ತವ್ಯ ನಿರ್ವಹಿಸಿ

ಅಭಿನಯ್ ಎಚ್.ಎಂ

ಹುಣಸೂರು: ಕೂಸಿನ ಮನೆ ಕೇಂದ್ರದ ಕೇರ್‌ಟೇಕರ್‌ಗಳು ಮಾತೃಹೃದಯದೊಂದಿಗೆ ಕರ್ತವ್ಯ ನಿರ್ವಹಿಸಿದಲ್ಲಿ ಮಾತ್ರ ಯೋಜನೆ ಸಾಫಲ್ಯ ಪಡೆಯಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ ಅಭಿಪ್ರಾಯಪಟ್ಟರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಕೂಸಿನ ಮನೆಯ ಕೇರ್ ಟೇಕರ್‌ಗಳಿಗೆ ಆಯೋಜಿಸಿದ್ದ ವಾರಕಾಲದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವರ್ಷದ ಹಿಂದೆ ರಾಜ್ಯ ಸರ್ಕಾರ ಕೂಸಿನ ಮನೆ ಯೋಜನೆ ಆರಂಭಿಸಿತು. ಕೂಲಿಯಾಳುಗಳು ಅಥವಾ ಇತರ ಸಂಘ, ಸಂಸ್ಥೆಗಳಲ್ಲಿ ದುಡಿಯುವ ಪತಿ-ಪತ್ನಿಗೆ ಮಕ್ಕಳನ್ನು ನೋಡಿಕೊಳ್ಳಲು, ಆರೈಕೆ ಮಾಡಲು ಆಗದ ಪರಿಸ್ಥಿತಿಯಲ್ಲಿ ಅಕ್ಕಪಕ್ಕದ ಮನೆಯವರು, ಬಂಧುಬಳಗದ ಮೊರೆ ಹೋಗಬೇಕಿತ್ತು. ಇದನ್ನು ತಪ್ಪಿಸಲು ಕೂಸಿನ ಮನೆ ಸ್ಥಾಪಿಸಿ ಸರ್ಕಾರ ನಿಯೋಜಿಸುವ ಕೇರ್‌ಟೇಕರ್‌ಗಳ ಮೂಲಕ ಕೆಲಸದಿಂದ ವಾಪಸ್ ಬರುವವರೆಗೆ ಮಕ್ಕಳನ್ನು ನೋಡಿಕೊಳ್ಳುವ ಯೋಜನೆ ಇದಾಗಿದೆ ಎಂದರು.

ಕೇರ್‌ಟೇಕರ್‌ಗಳಲ್ಲಿರುವ ಉದ್ಯೋಗಿಗಳು ನಿಜವಾದ ತಾಯಂದಿರಂತೆ. ಮಕ್ಕಳ ಲಾಲನೆ ಪಾಲನೆ ಮಾಡಿದಲ್ಲಿ ಮಾತ್ರ ಮಕ್ಕಳಲ್ಲಿ ಕ್ರಿಯಾಶೀಲತೆ, ಚುರುಕುತನ ಮೂಡಲು ಸಾಧ್ಯ. ಜತೆಗೆ ಮಕ್ಕಳನ್ನು ಬಿಟ್ಟು ಹೋದ ತಾಯಂದಿರಿಗೂ ಸಮಾಧಾನ ಆಗಲು ಸಾಧ್ಯ ಎಂದರು.

ತಾಲೂಕು ಪಂಚಾಯಿತಿಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಚಾಲಕಿ(ಐಇಸಿ ಕೋ ಆರ್ಡಿನೇಟರ್) ಪುಷ್ಪಾವತಿ ಮಾತನಾಡಿ, ಸರ್ಕಾರ ಮುಖ್ಯವಾಗಿ ಆರೋಗ್ಯ, ಆಹಾರ, ಶಿಕ್ಷಣ, ಸ್ವಚ್ಛತೆ ಮತ್ತು ಸುರಕ್ಷತೆಯ ಕ್ಷೇತ್ರಗಳ ಕುರಿತು ಕೇರ್ ಟೇಕರ್‌ಗಳು ಹೆಚ್ಚಿನ ಗಮನಹರಿಸಬೇಕು. ಮಕ್ಕಳಿಗೆ ತಾವು ತಮ್ಮ ಮನೆಯಲ್ಲಿಯೇ ಇದ್ದೇವೆ ಎನ್ನುವ ಭಾವನೆ ಮೂಡುವಂತಾಗಬೇಕು. ಈ ನಿಟ್ಟಿನಲ್ಲಿ ತಾಲೂಕಿನ 17 ಕೂಸಿನ ಮನೆ ಕೇಂದ್ರಗಳಲ್ಲೂ ಕೇರ್‌ಟೇಕರ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವೆಂದರು. ಸಂಪನ್ಮೂಲ ವ್ಯಕ್ತಿ ಎಸಿಡಿಪಿಒ ವೀಣಾ, ತಾ.ಪಂ.ಯೋಜನಾ ಅಧಿಕಾರಿ ರಾಜೇಶ್ ಮತ್ತು ಕೇರ್‌ಟೇಕರ್‌ಗಳು ಹಾಜರಿದ್ದರು.

17 ಕೇಂದ್ರಗಳು..135 ಕೇರ್‌ಟೇಕರ್‌ಗಳು: ತಾಲೂಕಿನ 17 ಗ್ರಾಪಂಗಳ ವ್ಯಾಪ್ತಿಯಲ್ಲಿ ಕೂಸಿನ ಮನೆ ಸ್ಥಾಪಿಸಲಾಗಿದೆ. ಪ್ರತಿ ಕೇಂದ್ರದಲ್ಲೂ ವಾರ್ಷಿಕ 8 ಕೇರ್‌ಟೇಕರ್‌ಗಳು ಅಂದರೆ ಮೂರು ತಿಂಗಳಿಗೆ ಇಬ್ಬರಂತೆ ಕರ್ತವ್ಯ ನಿರ್ವಹಿಸುತ್ತಾರೆ(ಒಟ್ಟು 136 ಕೇರ್‌ಟೇಕರ್‌ಗಳಿದ್ದಾರೆ). ಕೇರ್‌ಟೇಕರ್‌ಗಳಿಗೆ ಜಾಬ್‌ಕಾರ್ಡ್ ನೀಡುವ ಮೂಲಕ ನರೇಗಾ ಯೋಜನೆಯಡಿ ಪ್ರೋತ್ಸಾಹಧನ ನೀಡಲಾಗುತ್ತದೆ. 6 ತಿಂಗಳ ಹಿಂದೆ ಮೊದಲ ಹಂತದ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಎರಡನೇ ಹಂತದಲ್ಲಿ ಒಟ್ಟು 84 ಮಂದಿಗೆ ತರಬೇತಿ ನೀಡಲಾಗುತ್ತಿದೆ. ಕೂಸಿನ ಮನೆ ಯೋಜನೆಯಡಿ ಸ್ಥಳೀಯ ಮಹಿಳೆಯರಿಗೆ ಉದ್ಯೋಗ ಲಭಿಸುತ್ತದೆ. ಜೊತೆಯಲ್ಲಿ ಬಡಕೂಲಿಕಾರ್ಮಿಕ ದಂಪತಿಗೂ ತಮ್ಮ ಮಗು ಸುರಕ್ಷಿತ ಜಾಗದಲ್ಲಿದೆ ಎನ್ನುವ ಸಮಾಧಾನ ಸಿಗುತ್ತದೆ ಎಂದು ಇಒ ಕೆ.ಹೊಂಗಯ್ಯ ತಿಳಿಸಿದರು.