ಮೈಸೂರು: ಕಾಲೇಜು ಜೀವನದಲ್ಲಿ ಎಲ್ಲದರಲ್ಲೂ ಪರಿಪೂರ್ಣವಾಗಿರಬೇಕೆಂಬ ಹಂಬಲ ಇರುತ್ತದೆ. ಅದನ್ನು ಸಾಧಿಸಲು ಕಠಿಣ ಪರಿಶ್ರಮ, ಆತ್ಮವಿಶ್ವಾಸ ಅತ್ಯಂತ ಅವಶ್ಯಕ ಎಂದು ಪ್ರಾಧ್ಯಾಪಕ ರಾಜೇಶ್ ನಾಯರ್ ಹೇಳಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ, ಇಂಗ್ಲಿಷ್ ವಿಭಾಗ ಹಾಗೂ ಐಕ್ಯುಎಸಿ ಸಹಯೋಗದಲ್ಲಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ವಿದ್ಯಾರ್ಥಿ ಜೀವನದ ಶ್ರೇಷ್ಠತೆ ಗಳಿಸುವುದು ಹೇಗೆ?’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿದ್ಯಾರ್ಥಿ ಜೀವನವನ್ನು ಉತ್ತಮವಾಗಿಸಬೇಕು ಎಂದರೆ ಮೊದಲು ನಾವು ಕಾಲೇಜು ಜೀವನವನ್ನು ಆನಂದಿಸಬೇಕು. ಕಾಲೇಜಿನ ಎಲ್ಲ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸುವ ಮೂಲಕ, ಸಿಗುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಸ್ವಾಮಿ ವಿವೇಕಾನಂದರ ಮಾತನ್ನು ಉಲ್ಲೇಖಿಸಿದ ಅವರು, ನಂಬಿಕೆ ಇಲ್ಲದವನೇ ನಾಸ್ತಿಕ, ಆತ್ಮವಿಶ್ವಾಸವನ್ನು ಕುಗ್ಗಿಸುವ ಸಂದರ್ಭಗಳು ಜೀವನದಲ್ಲಿ ಬಹಳ ಬರುತ್ತವೆ. ಆದರೆ ನಾವು ನಮ್ಮ ಮೇಲೆ ಪೂರ್ಣ ವಿಶ್ವಾಸ ಹಾಗೂ ನಂಬಿಕೆಯನ್ನು ಹೊಂದಿದ್ದರೆ, ಯಾರು ಎಷ್ಟೇ ಟೀಕಿಸಿದರೂ ನಾವು ನಮ್ಮ ಪ್ರಯತ್ನವನ್ನು ಬಿಡುವುದಿಲ್ಲ. ವಿದ್ಯಾರ್ಥಿಯಾಗಿ, ಕಷ್ಟಪಟ್ಟು ಓದದೇ, ಇಷ್ಟಪಟ್ಟು ಓದಬೇಕು ಎಂದು ತಿಳಿಸಿದರು.
ನನ್ನ ದೇವರೊಬ್ಬನೇ ಶ್ರೇಷ್ಠ ಎಂಬುದು ಮೂರ್ಖತನ. ನಮ್ಮ ಒಳಗಡೆ ಇರುವ ಶಕ್ತಿಯೇ ದೇವರು. ಅದನ್ನು ಜಾಗೃತಗೊಳಿಸಿ, ಸರಿಯಾಗಿ ಉಪಯೋಗಿಸುವ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ನಮ್ಮ ಬುದ್ಧಿಯಲ್ಲಿ ನಕಾರಾತ್ಮಕ ಹಾಗೂ ಸಕಾರತ್ಮಕ ಎರಡೂ ಯೋಚನೆಗಳು ಇರುತ್ತವೆ.
ಮೊದಲು ಬುದ್ಧಿಯನ್ನು ಶುದ್ಧ ಮಾಡಿ, ಮನಸ್ಸಿನ ಚಂಚಲತೆಯನ್ನು ನಿರ್ವಹಿಸಿ, ನಮ್ಮೊಳಗಿರುವ ಏಕಾಗ್ರತೆಯನ್ನು ಉತ್ತೇಜಿಸಿವುದರ ಮೂಲಕ ಮನಸ್ಸಿನ ಪರಿಪೂರ್ಣತೆಯನ್ನು ಆನಂದಿಸಬೇಕು. ಲೋಕಾ ಸಮಸ್ತಾ ಸುಖಿನೋ ಭವಂತು ಎಂಬ ಧ್ಯೇಯದ ಮೂಲಕ ಕೇವಲ ನಮ್ಮ ಹಿತಕ್ಕಲ್ಲದೇ ಲೋಕದ ಹಿತಕ್ಕಾಗಿ ಬಾಳಬೇಕು. ಈ ಭಾವವನ್ನು ವಿದ್ಯಾರ್ಥಿ ಜೀವನದಿಂದಲೇ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಿ.ಗೀತಾ, ಡಿವೈನ್ ಪಾರ್ಕ್‌ನ ಸದಸ್ಯರಾದ ದಿವಾಕರ ಶೆಟ್ಟಿ, ನಾರಾಯಣ್ ಸ್ವಾಮಿ, ಉಷಾ ಕೀರ್ತಿ, ಚೇತನ, ಪಿಆರ್‌ಒ ಪೂರ್ಣಿಮಾ, ಸಹಾಯಕ ಇಂಗ್ಲಿಷ್ ಪ್ರಾಧ್ಯಾಪಕಿ ಎನ್.ಸಿ.ಹಂಸವೇಣಿ, ಸಹಾಯಕ ಕನ್ನಡ ಪ್ರಾಧ್ಯಾಪಕ ಎಂ.ನಾಗೇಶ್ ಇತರರಿದ್ದರು.