ಉಡುಪಿ: ಪೆರ್ಡೂರು ಅನಂತಪದ್ಮನಾಭ ದೇವಾಲಯದಲ್ಲಿ ವಿಜಯನಗರ ಕಾಲದ ದಶಾವತಾರ ಶಿಲ್ಪ ಪಟ್ಟಿಕೆಯ ದ್ವಾರಬಂಧ ಕಂಡು ಬಂದಿದೆ. ಕಂಚಿನ ದ್ವಾರಬಂಧವು ಸುಮಾರು 4.5 ಅಡಿ ಎತ್ತರ ಮತ್ತು 3.5 ಅಡಿ ಅಗಲವಾಗಿದೆ. ಅಡ್ಡ ಪಟ್ಟಿಕೆಯ ಮೇಲೆ ಗಜಲಕ್ಷಿ ಲಲಾಟ ಬಿಂಬವಿದೆ. ಎಡ-ಬಲದ ಲಂಭ ಪಟ್ಟಿಕೆಗಳ ಮೇಲೆ ಕ್ರಮವಾಗಿ ಅಂಜಲೀ ಮುದ್ರೆಯಲ್ಲಿ ನಿಂತಿರುವ ಆಂಜನೇಯ, ವ್ಯಾಳಿ, ವ್ಯಾಳಿಯ ಮುಖದಿಂದ ಹೊರಟ ಲತಾ ಕೋಷ್ಟಕಗಳ ಮಧ್ಯೆ ಮತ್ಸ$, ಕೂರ್ಮ, ವರಾಹ, ನರಸಿಂಹ ಮತ್ತು ವಾಮನಾವತಾರದ ಶಿಲ್ಪಗಳಿವೆ. ಉನ್ನತ ಪೀಠದ ಮೇಲೆ ಕುಳಿತಿರುವ ಲಕ್ಷಿ$್ಮ, ಎಡ-ಬಲದಲ್ಲಿ ಆನೆಗಳು ಪವಿತ್ರ ಕಳಸಗಳಿಂದ ಅಭಿಷೇಕ ಮಾಡುತ್ತಿವೆ. ಆನೆಗಳ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ರೇಖಾ ವಿನ್ಯಾಸಗಳು ಅಡ್ಡ ಪಟ್ಟಿಕೆಯ ಮೇಲಿವೆ. ನಂತರ ಪರುಶುರಾಮ, ರಾಮ, ಕಾಳಿಂಗ ಮರ್ಧನ ಬೆಣ್ಣೆ ಕೃಷ್ಣ, ಬೆತ್ತಲೆ ಬುದ್ಧ, ಕಲ್ಕಿ ಮತ್ತು ಅಂಜಲೀ ಮುದ್ರೆಯಲ್ಲಿ ನಿಂತಿರುವ ಗರುಡನ ಶಿಲ್ಪಗಳಿವೆ.
ಚಾರಿತ್ರಿಕ ಮಹತ್ವ
ಅನಂತಪದ್ಮನಾಭ ದೇವಾಲಯದ ಒಳ ಆವರಣದಲ್ಲಿ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಕೃಷ್ಣದೇವರಾಯನ ಕಾಲದ ಶಾಸನವಿದೆ. ಆ ಶಾಸನದಲ್ಲಿ ಚಕ್ರವರ್ತಿಯು, ದೇವಾಲಯದ ಅನಂತ ದೇವರಿಗೆ ನಿತ್ಯವೂ ನಡೆಯುವ ಅಮೃತಪಡಿ, ನಂದಾದೀಪ, ಶ್ರೀಬಲಿ, ನೈವೇದ್ಯ ಮತ್ತು ಪಂಚಪರ್ವಗಳಿಗೆ ಅಪಾರ ಪ್ರಮಾಣದ ಭೂದಾನವನ್ನು ನೀಡುತ್ತಾನೆ. ದೇವಾಲಯದ ಪಾರುಪತ್ಯವನ್ನು ನಡೆಸಲು ಸೂರಪ್ಪಯ್ಯ ಎಂಬ ಅಧಿಕಾರಿಯನ್ನು ನೇಮಿಸಿದ ಆದೇಶವನ್ನು ಶಾಸನ ಒಳಗೊಂಡಿದೆ. ಸಾಮ್ರಾಜ್ಯದ ಆರ್ಥಿಕಬಲದಿಂದ ಸೂರಪ್ಪಯ್ಯ ಅಧಿಕಾರಿ ಇಡೀ ದೇವಾಲಯವನ್ನು, ತೀರ್ಥಮಂಟಪವನ್ನು ಶಿಲಾಮಯವಾಗಿ ಜೀರ್ಣೋದ್ಧಾರ ಮಾಡುತ್ತಾನೆ. ಇದೇ ಸಮಯದಲ್ಲಿ ದೇವಾಲಯದ ಗರ್ಭಗುಡಿಯ ಪ್ರವೇಶ ದ್ವಾರಕ್ಕೆ ಕಂಚಿನ ದಶಾವತಾರ ಶಿಲ್ಪಗಳ ಪಟ್ಟಿಕೆಯನ್ನೂ ಮಾಡಿಸಲಾಗಿದೆ ಎನ್ನಬಹುದು. ಈ ಕಂಚಿನ ದ್ವಾರಬಂಧ 16ನೇ ಶತಮಾನಕ್ಕೆ ಸೇರಿದ ವಿಜಯನಗರ ಕಾಲದ ಶಿಲ್ಪ ಕಲಾಕೃತಿ ಎಂದು ನಿರ್ಧರಿಸಬಹುದಾಗಿದೆ. ಒಂಭತ್ತೆನೇ ಅವತಾರವಾಗಿ ಕಂಡುಬರುವ ಬೆತ್ತಲೆಯಾಗಿ ನಿಂತಿರುವ ಬುದ್ಧನ ಶಿಲ್ಪ ಅತ್ಯಂತ ಕುತೂಹಲಕಾರಿಯಾದದ್ದು. ಇದೇ ರೀತಿಯ ಶಿಲ್ಪ ಶೃಂಗೇರಿಯ ವಿದ್ಯಾಶಂಕರ ದೇವಾಲಯದ ಭಿತ್ತಿಯಲ್ಲಿ ಕಂಡುಬರುತ್ತದೆ. ಕಂಚಿನ ದ್ವಾರಬಂಧದ ಶಿಲ್ಪಗಳು ಸಂಪೂರ್ಣವಾಗಿ ವಿಜಯನಗರ ಶೈಲಿಯಲ್ಲಿವೆ ಎಂದು ನಿವೃತ್ತ ಪ್ರಾಚಿನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ತಿಳಿಸಿದ್ದಾರೆ.