ಉಡುಪಿ: ಸರ್ಕಾರ ಆದೇಶದ ಅನ್ವಯ ಸ್ಥಳಿಯ ಪ್ರಾಧಿಕಾರ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಗಳಿಂದ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಕಟ್ಟಡ, ಕೈಗಾರಿಕೆ, ಆಸ್ಪತ್ರೆ, ಪ್ರಯೋಗಾಲಯಗಳು, ಹೋಟೆಲ್ ಸೇರಿದಂತೆ ಮತ್ತಿತರ ವಾಣಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡದ ಭಾಷೆ ಬಳಕೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಅಧಿಕೃತ ಭಾಷೆಯ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ಗಳು, ಸಮಾಲೋಚನೆ ಕೇಂದ್ರ, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮಳಿಗೆಗಳು, ಬ್ಯಾಂಕ್ಗಳು, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್ಗಳು ಹಾಗೂ ಎಲ್ಲ ಖಾಸಗಿ ಸಂಸ್ಥೆಗಳು, ಮನರಂಜನಾ ಕೇಂದ್ರಗಳು, ಹೋಟೆಲ್ಗಳು ಒಳಗೊಂಡಂತೆ ಇತರೆ ಸಂಸ್ಥೆಗಳು ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆ ಶೇ.60ರ ಪ್ರಮಾಣದಲ್ಲಿದೆ. ನಾಮಫಲಕದಲ್ಲಿ ಕನ್ನಡ ಭಾಷೆ ಮೇಲ್ಭಾಗದಲ್ಲಿದೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದರು.
ಕನ್ನಡ ಭಾಷೆಯಲ್ಲಿ ನಿಯಮಾನುಸಾರ ನಾಮಫಲಕ ಅಳವಡಿಸದೇ ಇರುವವರಿಗೆ 7 ದಿನ ಕಾಲಾವಕಾಶ ನೀಡಿ, ನಿಯಮದ ಬಗ್ಗೆ ಅರಿವು ಮೂಡಿಸಬೇಕು. ನಿಯಮ ಉಲ್ಲಂಘಿಸಿದರೆ ಮೊದಲನೆಯ ಅಪರಾಧಕ್ಕೆ 5000 ದಂಡ, ಎರಡನೇ ಅಪರಾಧಕ್ಕೆ 10,000 ಹಾಗೂ ನಂತರದ ಪ್ರತಿಯೊಂದು ಅಪರಾಧಕ್ಕೆ 20,000 ದಂಡದೊಂದಿಗೆ ಪರವಾನಿಗೆಯನ್ನು ರದ್ದುಗೊಳಿಸಲಾಗುತ್ತದೆ ಎಂದರು.
ಸರ್ಕಾರಿ ಮತ್ತು ಸರ್ಕಾರದ ಅಧೀನ ಸಂಸ್ಥೆಗಳು, ಸ್ಥಳಿಯ ಪ್ರಾಧಿಕಾರಿಗಳು ಹೊರಡಿಸುವ ಎಲ್ಲ ಟೆಂಡರ್ ಅಧಿಸೂಚನೆ, ಜಾಹೀರಾತುಗಳು, ಅರ್ಜಿ ನಮೂನೆ, ಡಿಜಿಟಿಲ್ ನಮೂನೆ ಪ್ರಮಾಣಪತ್ರ ಮತ್ತು ಅಧಿಸೂಚನೆಗಳು, ಬ್ಯಾನರ್, ಫ್ಲೆಕ್ಸ್, ಎಲೆಕ್ಟ್ರ್ರಾನಿಕ್ ಫಲಕಗಳು, ನೋಟೀಸ್ಗಳು, ರಸೀದಿ ಬಿಲ್ಲುಗಳು, ಪತ್ರವ್ಯವಹಾರಗಳು ಪ್ರಮುಖವಾಗಿ ನಿಯಮಾನುಸಾರ ಕನ್ನಡ ಭಾಷೆಯಲ್ಲೇ ಇರುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಕೈಗಾರಿಕಾ ಮತು ್ತವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಕನ್ನಡ ಪೌರಯುಕ್ತ ರಾಯಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.