ಸಂಡೂರು: ಚೋರುನೂರು ಪೊಲೀಸ್ ಠಾಣೆ ನಿರ್ಮಾಣ ಸಂಸದ ಈ.ತುಕಾರಾಮ್ ಅವರ ಕನಸಿನ ಕೂಸಾಗಿತ್ತು. ಸರ್ಕಾರದ 1.80ಕೋಟಿ ರೂ. ಡಿಎಂಎಫ್‌ನಿಂದ 1.80 ಕೋಟಿ ರೂ. ಮೂಲಕ ರಾಜ್ಯದಲ್ಲಿಯೇ ಮಾದರಿ ಠಾಣೆ ನಿರ್ಮಿಸಿದ್ದಾರೆ ಎಂದು ಐಜಿಪಿ ಇ.ಎಸ್.ಲೋಕೇಶ್ ಕುಮಾರ್ ಹೇಳಿದರು.
ಚೋರುನೂರಿನಲ್ಲಿ ಪೊಲೀಸ್ ಠಾಣೆ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಜಿಮ್, ಫಂಕ್ಷನ್ ಹಾಲ್ ಒಳಗೊಂಡಿರುವ ಠಾಣೆಯನ್ನು ಮಾದರಿಯಾಗಿ ನಿರ್ಮಿಸಿದ್ದಾರೆ. ಪೊಲೀಸ್ ಠಾಣೆಗೆ ಬಂದ ಜನ ನೆಮ್ಮದಿಯಾಗಿ ಹೊರಗೆ ಹೋಗುವಂತೆ ಮಾಡಬೇಕು. ಪ್ರತಿ ಕೇಸಿಗೆ ನ್ಯಾಯ ಒದಗಿಸುವ ಕಾರ್ಯ ನಡೆಯಲಿ ಎಂದರು.
ಸಂಸದ ಈ.ತುಕಾರಾಮ್ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಂದಾಯ ಮತ್ತು ಪೊಲೀಸ್ ಇಲಾಖೆ ಎರಡು ಕಣ್ಣಿದ್ದಂತೆ. ಸಂಡೂರಲ್ಲಿ ಠಾಣೆ ನಿರ್ಮಿಸಿ ಕೊಡುವುದಾಗಿ ಹೇಳುತ್ತಿದ್ದೇನೆ. ಸಿಪಿಐಗೆ ಮೂರು ಬೆಡ್ ರೂಂ, ಪಿಎಸ್‌ಐ ಮತ್ತು ಪೇದೆಗಳಿಗೆ ಡಬಲ್ ಬೆಡ್ ರೂಮ್ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ಎಸ್‌ಪಿ.ಶೋಭಾರಾಣಿ ಮಾತನಾಡಿ, ಎಲ್ಲರೂ ಸರ್ಕಾರದ ಸಂಬಳ ತಗೊಂಡು ಕೆಲಸ ಮಾಡುತ್ತಿದ್ದೇವೆ. ಧರ್ಮಕ್ಕೆ ಯಾರೂ ಕೆಲಸ ಮಾಡುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸಿಬ್ಬಂದಿಗೆ ಸೂಚಿಸಿದರು. ಶಾಸಕಿ ಅನ್ನಪೂರ್ಣ ತುಕಾರಾಮ್ ಮಾತನಾಡಿ, ಠಾಣೆಗೆ ನೊಂದವರು, ಅಸಹಾಯಕರು, ಮಹಿಳೆಯರು, ಅಬಲೆಯರು ಬಂದರೆ ಅವರಿಗೆ ಸಾಂತ್ವಾನ ನೀಡುವ ಕೇಂದ್ರವಾಗಲಿ ಎಂದರು.
ಹೆಚ್ಚುವರಿ ಎಸ್ಪಿ ನವೀನ್ ಕುಮಾರ್, ಡಿಎವೈಎಸ್ಪಿ ಪ್ರಸಾದ್ ಗೋಖಲೆ, ಗ್ರಾಪಂ ಅಧ್ಯಕ್ಷೆ ಅಂಜಿನಮ್ಮ, ಚೋರುನೂರು ಠಾಣೆ ಪಿಎಸ್‌ಐ ರೇವಣಸಿದ್ದಪ್ಪ, ಸಿಪಿಐಗಳಾದ ಮಹೇಶ್ ಗೌಡ, ವಿಶ್ವನಾಥ ಹಿರೇಗೌಡ, ವಾಸು, ಪಿಎಸ್‌ಐಗಳಾದ ವೀರೇಶ್ ಮಾಳಶೆಟ್ಟಿ, ಯು.ಡಾಕೇಶ್ ಇತರರಿದ್ದರು.