ಜಿಲ್ಲೆ

ಕಾಳುಮೆಣಸು, ಕಾಫಿ ಬೆಳೆ ಮಾಹಿತಿ ಶಿಬಿರ

Mangaluru - Nishantha Narayana

ಪುತ್ತೂರು: ಅಡಕೆಗೆ ಉಪಬೆಳೆಯಾಗಿ ಕಾಳುಮೆಣಸು ಮತ್ತು ಕಾಫಿ ಬೆಳೆಯ ಕುರಿತು ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಕಾಫಿ ಬೆಳಗಾರರ ಒಕ್ಕೂಟದಿಂದ ಮಾಹಿತಿ ಶಿಬಿರ ಮತ್ತು ಸಮಾವೇಶ ಆ.೧೦ರಂದು ಮುಕ್ರಂಪಾಡಿ ಸುಭದ್ರ ಸಭಾ ಮಂದಿರದಲ್ಲಿ ನಡೆಯಲಿದೆ ಎಂದು ಒಕ್ಕೂಟ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಹೇಳಿದರು.

ಅಡಕೆಗೆ ಬಾಽಸುತ್ತಿರುವ ಹಳದಿರೋಗ, ಎಲೆಚುಕ್ಕಿ ರೋಗ, ಎಳೆ ನಳ್ಳಿ ಉದುರುವಿಕೆಯಂತಹ ಸಮಸ್ಯೆ, ಅಡಕೆ ಕೊಯ್ಯಲು, ಔಷಧ ಸಿಂಪಡಣೆಗೆ ನುರಿತ ಕಾರ್ಮಿಕರ ಅಭಾವ ಉಂಟಾಗುತ್ತಿರುವ ಸಂದರ್ಭ ಬೇರೆ ಬೆಳೆಗಳೆಡೆಗೆ ದೃಷ್ಟಿ ಹಾಯಿಸುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಕಾಳುಮೆಣಸು ಮತ್ತು ಕಾಫಿ ಬೆಳೆಯಲ್ಲಿ ತೊಡಗಿಕೊಳ್ಳುವ ಚಿಂತನೆಯಲ್ಲಿರುವವರನ್ನು ಗಮನದಲ್ಲಿರಿಸಿಕೊಂಡು ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಬೆಳಗ್ಗೆ ೯.೩೦ಕ್ಕೆ ಆರಂಭಗೊಳ್ಳಲಿದೆ. ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದು, ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ಡಾ.ವೇಣುಗೋಪಾಲ್ ಸಮಗ್ರ ಮಾಹಿತಿ ನೀಡಲಿದ್ದಾರೆ. ೭ಬಿನ್ ಟೀಮ್ ಮುಖ್ಯಸ್ಥ ಡಾ.ಎಚ್.ಎಸ್.ಧರ್ಮರಾಜ್ ಸಕಲೇಶಪುರ ಕಾಫಿ ಮತ್ತು ಕಾಳುಮೆಣಸಿಗೆ ನೀಡುವ ಪೋಷಕಾಂಶಗಳ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ. ಇಂದೋರ್‌ನ ಶ್ರೀ ಸದ್ಧಿ ಅಗ್ರಿ ಕಂಪನಿ ಮುಖ್ಯಸ್ಥ ಪೆರುವೊಡಿ ನಾರಾಯಣ ಭಟ್ ಅಡಕೆ ಬೆಳೆಯುವ ವಿಧಾನ ಮತ್ತು ಪೋಷಕಾಂಶಗಳ ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಳುಮೆಣಸು ಮತ್ತು ಕಾಫಿ ಬೆಳೆ ಪ್ರಗತಿಪರ ಕೃಷಿಕರಾದ ಅಜಿತ್ ಪ್ರಸಾದ್ ರೈ ದಂಪತಿ ಮತ್ತು ಪೆರುವೋಡಿ ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಾಗಾರದಲ್ಲಿ ಹಣ್ಣಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದರು.

ಒಕ್ಕೂಟದ ಸದಸ್ಯ ಗೋವಿಂದ ಭಟ್ ಬಾಯಾಡಿ, ಕಾಳುಮೆಣಸು ಕೃಷಿಕ ಅಜಿತ್ ಪ್ರಸಾದ್ ರೈ, ಸೇಡಿಯಾಪು ಜನಾರ್ದನ ಭಟ್, ಒಕ್ಕೂಟ ಕಾರ್ಯದರ್ಶಿ ಅಭಿಜಿತ್ ಬಿ.ಪುತ್ತೂರು ಇದ್ದರು.