ಆರ್.ಕೃಷ್ಣ ಮೈಸೂರು
ಕುಡಿದು ವಾಹನ ಸವಾರಿ ಮಾಡುವವರನ್ನು ಪತ್ತೆ ಹಚ್ಚುವ ಪೊಲೀಸರು ಹಾಗೂ ಸಾರ್ವಜನಿಕರಿಗೆ ಈಗ ಸಾಂಕ್ರಾಮಿಕ ರೋಗ ಅಂಟುವ ಭಯ ಕಾಡಲಾರಂಭಿದೆ.
ಮದ್ಯ ಸೇವಿಸಿ ವಾಹನ ಚಾಲಾಯಿಸುವವರನ್ನು ತಪಾಸಣೆ ಮಾಡಬೇಕಾಗಿದ್ದು, ಆ ಸಮಯದಲ್ಲಿ ಕುಡಿದಿದ್ದಾರೆಯೇ, ಇಲ್ಲವೇ ಎನ್ನುವುದನ್ನು ಪತ್ತೆ ಮಾಡಲು ಮುಖಕ್ಕೆ ಮುಖಕೊಟ್ಟು ಪತ್ತೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ವೇಳೆ ಬಾಯಿಯಿಂದ ಬಾಯಿಗೆ ಸಾಂಕ್ರಾಮಿಕ ವೈರಾಣು ಹರಡಿದರೆ, ಸಾರ್ವಜನಿಕರು ಹಾಗೂ ಪೊಲೀಸರು ಇಬ್ಬರಿಗೂ ಸಮಸ್ಯೆಯಾಗಲಿದೆ.
ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಬಾಯಿ ಹತ್ತಿರ ಬಂದು ಮೂಸಿ ನೋಡುವ ಮೂಲಕ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿರುವವರನ್ನು ಪತ್ತೆ ಹಚ್ಚುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಮತ್ತೆ ತಪಾಸಣೆ ಆರಂಭಗೊಂಡಿದೆ.
ದ್ವಿಚಕ್ರ ವಾಹನ ಸವಾರರ ತಡೆದು ನಿಲ್ಲಿಸಿ ತಪಾಸಣೆ ನಡೆಸಿದರೆ, ಕಾರು ಸೇರಿದಂತೆ ನಾಲ್ಕು ಚಕ್ರ ವಾಹನಗಳಲ್ಲಿ ಬರುವ ವಾಹನ ಸವಾರರು ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಪೊಲೀಸ್ ಸಿಬ್ಬಂದಿ ಕಾರಿನೊಳಗೆ ಮುಖ ಹಾಕಿ ಪರೀಕ್ಷಿಸುತ್ತಿದ್ದಾರೆ.
ಪೊಲೀಸ್ ಸಿಬ್ಬಂದಿಯ ಈ ಕಾರ್ಯಾಚರಣೆಗೆ ವಾಹನ ಸವಾರರಿಗೆ ಕಿರಿ ಕಿರಿ ತರುತ್ತಿದೆ. ಪೊಲೀಸರಿಗೂ ತಮ್ಮ ಈ ಕೆಲಸ ಅಸಹನೀಯವಾಗಿದ್ದು, ಸಾರ್ವಜನಿಕ ವಲಯದಲ್ಲಿ ಪೊಲೀಸರ ಡ್ರಂಕ್ ಅಂಡ್ ಡ್ರೈವ್ ಪತ್ತೆ ಕಾರ್ಯಾಚರಣೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ಪತ್ತೆಗೆ ಪೊಲೀಸರು ಡಾಗ್ ಸ್ಕ್ವಾಡ್‌ನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರದಲ್ಲಿ ರಾತ್ರಿ ವೇಳೆ ತೀವ್ರ ತರದಲ್ಲಿ ನಡೆಯುತ್ತಿರುವ ಡ್ರಂಕ್ ಅಂಡ್ ಡ್ರೈವ್ ಕಾರ್ಯಾಚರಣೆ ಮದ್ಯಪ್ರಿಯರ ನಿದ್ದಿಗೆಡಿಸಿದೆಯಲ್ಲದೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಪೊಲೀಸ್ ಸಿಬ್ಬಂದಿಗೆ ವಾಕರಿಕೆ ಬರುವಂತೆ ಮಾಡಿದೆ. ಜತೆಗೆ ವಾಹನ ಸವಾರರಿಗೆ ಕಿರಿ ಕಿರಿಯುಂಟು ಮಾಡಿದೆ.
ರಾಜ್ಯ ಪೊಲೀಸ್ ಇಲಾಖೆಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಇತ್ತೀಚೆಗೆ ಮೈಸೂರು ನಗರಕ್ಕೆ ಭೇಟಿ ನೀಡಿದ ವೇಳೆ ರಸ್ತೆ ಅಪಘಾತ ಪ್ರಕರಣಗಳನ್ನು ಪರಿಶೀಲಿಸಿ ಅದರಲ್ಲಿ ಬಹುತೇಕ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದರಿಂದ ಅಪಘಾತ ಹೆಚ್ಚಾಗಿರುವುದನ್ನು ಗಮನಿಸಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆಯನ್ನು ತೀವ್ರಗೊಳಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ನಗರ ಸೇರಿದಂತೆ ರಿಂಗ್ ರಸ್ತೆ ವ್ಯಾಪ್ತಿಯಲ್ಲಿ 15 ಕಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿಕೊಂಡು ಪೊಲೀಸರು ರಾತ್ರಿ 9 ರಿಂದ 11.30 ರವರೆಗೆ ತಪಾಸಣೆ ಕಾರ್ಯ ನಡೆಸುತ್ತಾ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದಕ್ಕೆ ನಿಯಂತ್ರಣ ಹೇರುತ್ತಿದ್ದಾರೆ.
ಆದರೆ ತಪಾಸಣೆ ವೇಳೆ ವೈಜ್ಞಾನಿಕವಾಗಿ ಇರುವ ಬ್ರೆಥ್ ಅನಾಲೈಸರ್ ಮತ್ತು ಆಲ್ಕೊಹಾಲಿಕ್ ಮೀಟರ್‌ಗಳನ್ನು ಬಳಕೆ ಮಾಡದೇ ವಾಹನ ಸವಾರರನ್ನು ಮೂಸಿ ನೋಡುವ ಮೂಲಕ ಮದ್ಯ ಸೇವನೆ ಮಾಡಿರುವುದನ್ನು ಪೊಲೀಸ್ ಸಿಬ್ಬಂದಿ ಪತ್ತೆ ಹಚ್ಚುತ್ತಿದ್ದಾರೆ.ಪೊಲೀಸರ ಈ ಕಾರ್ಯ ವೈಖರಿಗೆ ವಾಹನ ಸವಾರರಿಂದ ಆಕ್ಷೇಪ ವ್ಯಕ್ತಪಡಿಸಿ ನಗರ ಪೊಲೀಸ್ ಆಯುಕ್ತರೊಂದಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದರು. ತಪಾಸಣೆ ಪೊಲೀಸರಿಂದ ತಮಗೆ ಕಿರಿ ಕಿರಿ ಉಂಟು ಮಾಡಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವುದರೊಂದಿಗೆ ಈ ರೀತಿ ತಪಾಸಣಾ ಕಾರ್ಯದಿಂದ ಪೊಲೀಸ್ ಸಿಬ್ಬಂದಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವುದರೊಂದಿಗೆ ಬೇರೆಯವರಿಗೆ ಹರಡಿಸದಂತೆ ಬದಲಿ ಮಾರ್ಗದಲ್ಲಿ ವೈಜ್ಞಾನಿಕವಾಗಿ ತಪಾಸಣೆ ನಡೆಸಬೇಕು ಎಂದು ಸಲಹೆ ನೀಡಿದ್ದರು. ಆದರೆ ಅದು ಸಾಧ್ಯವಾಗದೆ ಹಳೆಯ ಪದ್ಧತಿಯಂತೆ ಮೂಸಿ ನೋಡುವ ಮೂಲಕ ತಪಾಸಣೆ ಮಾಡಲಾಗುತ್ತಿದೆ.
ಆಲ್ಕೋ ಹಾಲಿಕ್ ಮೀಟರ್ ಬಳಕೆ
ಆಲ್ಕೋ ಹಾಲಿಕ್ ಮೀಟರ್ ಬಳಸಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಬೇಕು ಎಂದು ಈಗಾಗಲೇ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ತಪಾಸಣೆ ವೇಳೆ ಮುಖಕ್ಕೆ ಮುಖ ಹಿಡಿದರೆ ಇಬ್ಬರಿಗೂ ತೊಂದರೆ ಅಗುವುದರಿಂದ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಮದ್ಯ ಸೇವಿಸಿರುವುದು ಕಂಡು ಬಂದರೆ ವಾಹನ ವಶಕ್ಕೆ ಪಡೆದು ದಂಡ ವಿಧಿಸಲಾಗುತ್ತದೆ.
ಪರಶುರಾಮಪ್ಪ ಎಸಿಪಿ, ಸಂಚಾರ ವಿಭಾಗ