ಸಂಡೂರು: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕರೊನಾ ಡೆತ್ ಆಡಿಟ್ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದು ಮಾಜಿ ಸಚಿವ ಸಂತೋಷಲಾಡ್ ಹೇಳಿದರು.
ಸಮೀಪದ ಕೃಷ್ಣಾನಗರದ ಶಾಸಕರ ಸಂಪರ್ಕ ಕಚೇರಿ ಆವರಣದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಕರೊನಾ ಸಹಾಯ ಹಸ್ತ ಅನುಷ್ಠಾನ ಸಭೆಯಲ್ಲಿ ಮಾತನಾಡಿದರು. ಕರೊನಾ ನಿಯಂತ್ರಿಸುವುದಿರಲಿ ಸೋಂಕಿನಿಂದ ಮೃತಪಟ್ಟವರನ್ನು ಗೌರವ ಪೂರ್ವಕವಾಗಿ ಅಂತ್ಯಕ್ರಿಯೆ ಮಾಡಲೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಿಲ್ಲ. ಕರೊನಾ ನಿಯಂತ್ರಣದ ಸಾಮಗ್ರಿ ಖರೀದಿಯಲ್ಲೂ ಅವ್ಯವಹಾರ ಮಾಡುವ ಮೂಲಕ ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡುಉತ್ತಿದೆ ಎಂದು ಕಿಡಿಕಾರಿದರು. ಕರೊನಾ, ಸಹಜ ಸಾವುಗಳ ಅಂಕಿಅಂಶ ಪಡೆದು ಬೂತ್ ಮಟ್ಟದಲ್ಲಿ ಮನೆ, ಮನೆಗೆ ತೆರಳಿ ಮೃತಪಟ್ಟವರ ಕುಟುಂಬಗಳ ಹಿಂದಿನ ಸ್ಥಿತಿಗತಿ ಏನು ಎಂಬ ಕುರಿತು ಸಂಪೂರ್ಣ ಮಾಹಿತಿಯನ್ನು 8-10 ದಿನದೊಳಗೆ ಪಡೆದು ವರದಿ ಸಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಶಾಸಕ ಇ.ತುಕಾರಾಮ್ ಮಾತನಾಡಿ, ಕೇಂದ್ರ ಸರ್ಕಾರ ರೈಲ್ವೆ, ಬಿಎಸ್‌ಎನ್‌ಎಲ್, ಎಲ್‌ಐಸಿ, ವಿಮಾನಯಾನ ಖಾಸಗೀಕರಣದ ಹೆಸರಲ್ಲಿ ಕಾರ್ಪೋರೇಟ್‌ಮಯಗೊಳಿಸಿ ನಿರುದ್ಯೋಗ ಸಮಸ್ಯೆ ಹೆಚ್ಚಿಸಿದೆ. ಸರ್ಕಾರದ ದುರಾಡಳಿತದಿಂದ ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ ಎಂದು ದೂರಿದರು. ಮಾಜಿ ಎಂಎಲ್ಸಿ ಕೆಎಸ್‌ಎಲ್ ಸ್ವಾಮಿ, ಜಿಲ್ಲಾ ಗ್ರಾಮೀಣ, ನಗರ ಘಟಕಗಳ ಅಧ್ಯಕ್ಷರಾದ ಶಿವಯೋಗಿ, ಮಹ್ಮದ್ ರಫೀಕ್, ಮಹಿಳಾ ಗ್ರಾಮೀಣ ಘಟಕದ ಜಿಲ್ಲಾ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಬ್ಲಾಕ್ ಅಧ್ಯಕ್ಷರಾದ ಜಿ.ಏಕಾಂಬ್ರಪ್ಪ, ಉಪಾಧ್ಯಕ್ಷ ಕೆ.ನೂರ್ ಅಹ್ಮದ್, ವಾಡಾ ಮಾಜಿ ಅಧ್ಯಕ್ಷ ರೋಷನ್ ಜಮೀರ್, ಪುರಸಭೆ ಅಧ್ಯಕ್ಷೆ ಅನಿತಾ ವಸಂತಕುಮಾರ್, ಉಪಾಧ್ಯಕ್ಷ ವೀರೇಶ ಸಿಂಧೆ ಇತರರಿದ್ದರು.