ರಾಯಚೂರು ತಾಲೂಕಿನ ತ್ತೆಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸೇತುವೆ ಮೇಲೆ ಹಳ್ಳದ ನೀರು ಹರಿಯುತ್ತಿದ್ದರೂ ಸೋಮವಾರ ಬೆಳಗ್ಗೆ ಬೈಕ್‌ನಲ್ಲಿ ಹೋಗುತ್ತಿರುವ ಜನರು. 
ಜಿಲ್ಲೆ

ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತ

ರಾಯಚೂರು: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಹಳ್ಳಗಳು ತುಂಬಿ ಹರಿಯುತ್ತಿವೆ. ಬಹಳಷ್ಟು ಕಡೆ ಮರ ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಮನೆಗಳ ಮೇಲಿನ ಟಿನ್ ಶೆಡ್‌ಗಳು ಹಾರಿಹೋಗಿವೆ.
ನಗರದ ತ್ತೆಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಬೆಳಗ್ಗೆ ಜನರು ಬೈಕ್‌ಗಳಲ್ಲಿ ಅಪಾಯಕರ ಸ್ಥಿತಿಯಲ್ಲಿ ರಸ್ತೆ ದಾಟಲು ಹರ ಸಾಹಸ ನಡೆಸಿದರು. ಜಿಲ್ಲೆಯ ಹಲವು ಗ್ರಾಮಗಳಿಗೆ ಹೊಗುವ ರಸ್ತೆ ಮೇಲೆ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಳ್ಳುವಂತಾಗಿತ್ತು.
ಬಹುತೇಕ ಕಡೆ ದೊಡ್ಡ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರಿಳಿದ್ದು, ರಾತ್ರಿಯಿಂದ ಮಧ್ಯಾಹ್ನದವರೆಗೆ ವಿದ್ಯುತ್ ಸರಬರಾಜು ಇಲ್ಲದೆ ಜನರು ಪರದಾಡುವಂತಾಗಿತ್ತು. ಮತ್ತೊಂದೆಡೆ ಮನೆಗಳ ಮೇಲಿನ ಟಿನ್‌ಗಳು ಬಿರುಗಾಳಿಗೆ ಹಾರಿಹೋಗಿ ಜನರು ಜಾಗರಣೆ ನಡೆಸುವಂತಾಗಿತ್ತು.
ರಾಯಚೂರು ತಾಲೂಕಿನ ಯರಗೇರಾದಲ್ಲಿ 35.5 ಮಿ.ಮೀ., ಲಿಂಗಸುಗೂರು ಪಟ್ಟಣದಲ್ಲಿ 44 ಮಿ.ಮೀ., ತಾಲೂಕಿನ ರೋಡಲಬಂಡಾದಲ್ಲಿ 45.5 ಮಿ.ಮೀ., ಅಮದಿಹಾಳನಲ್ಲಿ 42.5 ಮಿ.ಮೀ., ಉಪ್ಪಾರ ನಂದಿಹಾಳನಲ್ಲಿ 40 ಮಿ.ಮೀ., ಗೌಡೂರಿನಲ್ಲಿ 32.5 ಮಿ.ಮೀ., ಮಸ್ಕಿ ತಾಲೂಕಿನ ತಲೆಖಾನ್‌ನಲ್ಲಿ 43.5 ಮಿ.ಮೀ., ಸಿಂಧನೂರು ತಾಲೂಕಿನ ಗುಂಜಳ್ಳಿಯಲ್ಲಿ 38 ಮಿ.ಮೀ., ಉಮಲೂಟಿಯಲ್ಲಿ 33.5 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.