ಕನಕಗಿರಿ: ಜನರ ಸಮಸ್ಯೆಗಳಿಗೆ ರಾಜ್ಯ ಸರ್ಕಾರದಿಂದ ಸ್ಪಂದನೆಯಿಲ್ಲದಂತಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದರು.
ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೌರ ಕಾರ್ಮಿಕರಿಗೆ ಹಾಗೂ ಬಡವರಿಗೆ ಗುರುವಾರ ಆಹಾರ ಸಾಮಗ್ರಿ ಕಿಟ್‌ಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯಿದೆ. ಆದರೆ, ರಾಜ್ಯದ ಜನರು ಅನುಭವಿಸುತ್ತಿರುವ ಕಷ್ಟ ಸರ್ಕಾರಕ್ಕೆ ಕಾಣಿಸುತ್ತಿಲ್ಲ. ಕಷ್ಟಗಳನ್ನು ಹೇಳಿದರೂ ಕೇಳಿಸಿಕೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಕನಕಗಿರಿ ಕ್ಷೇತ್ರದಲ್ಲಿ ಕೋವಿಡ್ ಆಸ್ಪತ್ರೆಗಳಿಲ್ಲ. ಕೋವಿಡ್ ಆಸ್ಪತ್ರೆ ಆರಂಭಿಸುವಂತೆ ಬರೆದಿರುವ ಪತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಂದಿಸಿದ್ದಾರೆ. ಆದರೆ, ಆಸ್ಪತ್ರೆ ಆರಂಭಿಸುವಂತೆ ಸಚಿವರು ಸೂಚಿಸಿದ್ದರೂ ಇನ್ನೂ ಕಾರ್ಯಗತವಾಗಿಲ್ಲ. ಕೋವಿಡ್ ನಿರ್ವಹಣೆಯಲ್ಲಿ ಕ್ಷೇತ್ರದ ಶಾಸಕರು ಸಂಪೂರ್ಣ ವಿಫಲವಾಗಿದ್ದಾರೆ. ಆಸ್ಪತ್ರೆ ಆರಂಭಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರದ ಹಿನ್ನೆಲೆಯಲ್ಲಿ ಹಲವರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಆರೋಪಿಸಿದರು.
ನಾನು ಅಭಿವೃದ್ಧಿ ಕಾರ್ಯಕ್ಕೆ ಯಾವತ್ತೂ ಅಡ್ಡಗಾಲು ಹಾಕಿಲ್ಲ. ಆದರೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಬಿಜೆಪಿಯಲ್ಲಿ ರಾಜಕೀಯ ಮೇಲಾಟ ನಡೆದಿದೆ. ಕರೊನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವ ಬದಲಿಗೆ ಶಾಸಕರು ಸಹಿ ಸಂಗ್ರಹ ಹಾಗೂ ಸಭೆಗಳನ್ನು ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ತಂಗಡಗಿ ಹೇಳಿದರು. ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮತ್ತು ಇತರರಿದ್ದರು.