ರಾಯಚೂರು ಜಿಲ್ಲೆಯಾದ್ಯಂತ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದ್ದು, ಬುಧವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿ ಸಂಚಾರಕ್ಕೆ ಜನರು ತಾಪತ್ರಯ ಪಡುವಂತಾಗಿದೆ.
ಕಳೆದ ಎರಡೂರು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ, ನಡುವೆ ಮಳೆಗೆ ಬಿಡುವು ಇರುತ್ತಿತ್ತು. ಆದರೆ ಬುಧವಾರ ರಾತ್ರಿಯಿಂದ ಆರಂಭವಾದ ಮಳೆ ಗುರುವಾರ ಬೆಳಗ್ಗೆವರೆಗೆ ನಿರಂತರವಾಗಿ ಸುರಿಯುತ್ತಿರುವುದರಿಂದ ಕೆಲಸ ಕಾರ್ಯಗಳಿಗಾಗಿ ಓಡಾಡುವವರಿಗೆ ಸಮಸ್ಯೆಯಾಯಿತು.
ನಗರ ಸೇರಿ ಜಿಲ್ಲಾಧ್ಯಂತ ಕಳೆದ 24 ಗಂಟೆಯಲ್ಲಿ ಒಟ್ಟು 8.8 ಮೀ.ಮಿ ಮಳೆ ವರದಿಯಾಗಿದ್ದು, ಈ ಪೈಕಿ ದೇವದುರ್ಗ 16.04 ಮೀ.ಮಿ,ಲಿಂಗಸೂಗೂರು 02 ಮೀ.ಮಿ,ಮಾನ್ವಿ 2 ಮೀ.ಮಿ,ರಾಯಚೂರು 27.4 ಮೀ.ಮಿ,ಸಿಂಧನೂರು 0.1 ಮೀ.ಮಿ,ಮಸ್ಕಿ 0.1 ಮೀ.ಮಿ,ಸಿರವಾರ 6.4 ಮೀ.ಮಿ ಮಳೆಯಾಗಿದೆಂದು ಜಿಲ್ಲಾಡಳಿತ ಮಾಹಿತಿ ನೀಡಿದ್ದು, ಮಳೆಯಿಂದ ಮಣ್ಣಿನ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ನಗರದ ಮುಖ್ಯ ರಸ್ತೆಗಳಲ್ಲಿನ ಚರಂಡಿಗಳು ತುಂಬಿ ರಸ್ತೆಗೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ವ್ಯಾಪಾರಸ್ಥರು ಮಳೆಯಿಂದಾಗಿ ಜನರು ಬಾರದೆ ವಹಿವಾಟು ಕುಂಠಿತಗೊಂಡು ಸಂಕಷ್ಟ ಎದುರಿಸುವಂತಾಗಿದೆ. ಗ್ರಾಮಾಂತರದ ಪ್ರದೇಶದಲ್ಲಿನ ಮಣ್ಣಿನ ಮನೆಗಳಲ್ಲಿನ ಜನರಿಗೆ ನಿರಂತರ ಮಳೆಯಿಂದ ಗೋಡೆಗಳು ಬೀಳುವ ಆತಂಕ ಎದುರಾಗಿದ್ದರೆ, ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಜನರು ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ. ಜತೆಗೆ ನಿರಂತರ ವಿದ್ಯುತ್ ಕಡಿತದಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.