ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿ ಗೇಟ್ ಬಳಿ ಮಂಗಳವಾರ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಾಗಾರವನ್ನು ವಲಯ ಅರಣ್ಯಾಧಿಕಾರಿ ಪಿ.ಎಸ್.ಅಭಿಷೇಕ್ ಉದ್ಘಾಟಿಸಿದರು. ಕೆ.ದೀಪಕ್, ವೆಂಕಟಪ್ಪ, ದಾ.ರಾ.ಮಹೇಶ್, ಸಿ.ಎನ್.ವಿಜಯ್, ನವೀನ್ ಕುಮಾರ್ ಇತರರು ಇದ್ದರು.  
ಜಿಲ್ಲೆ

ಅರಣ್ಯ, ವನ್ಯಜೀವಿಗಳ ರಕ್ಷಣೆಗೆ ಜನರ ಸಹಕಾರ ಅಗತ್ಯ

ಪಿರಿಯಾಪಟ್ಟಣ: ಕಾಡು ಹಾಗೂ ಕಾಡು ಪ್ರಾಣಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆಯೊಂದಿಗೆ ಸಮುದಾಯದ ಸಹಕಾರ ಅತ್ಯಗತ್ಯ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿ ವಲಯದ ಆರ್‌ಎಫ್‌ಒ ಪಿ.ಎಸ್.ಅಭಿಷೇಕ್ ಹೇಳಿದರು.

ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿ ಗೇಟ್ ಬಳಿ ಮಂಗಳವಾರ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹೆಸರು ಬರುವುದಕ್ಕಿಂತ ಮುಂಚೆ 1955ರಲ್ಲಿ ವನ್ಯಜೀವಿಧಾಮವಾಗಿ ಪ್ರಾರಂಭವಾಗಿ ಬಳಿಕ 1983ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಮರುನಾಮಕರಣವಾಯಿತು. 1988ರಲ್ಲಿ ರಾಜೀವ್ ಗಾಂಧಿ ಅವರು ಈ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದು ಹೆಸರಿಡಲಾಯಿತು. 1992ರಿಂದ 98 ರವರೆಗಿನ ಹುಲಿಗಣತಿ ವರದಿಯನ್ನು ಆಧರಿಸಿ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಸಂತತಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲಾಯಿತು. ಹುಣಸೂರು, ಎಚ್.ಡಿ ಕೋಟೆ, ವಿರಾಜಪೇಟೆ ಹಾಗೂ ಪಿರಿಯಾಪಟ್ಟಣ ತಾಲೂಕಿನ ಹಲವು ಪ್ರಾದೇಶಿಕ ಮೀಸಲು ಅರಣ್ಯ ಪ್ರದೇಶಗಳನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರ್ಪಡೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.

ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಆನೆ, ಹುಲಿ, ಚಿರತೆ, ಕಾಡೆಮ್ಮೆ ಸೇರಿದಂತೆ ವಿವಿಧ ಬಗೆಯ ವನ್ಯಜೀವಿಗಳನ್ನು, ಪಕ್ಷಿ ಸಂಕುಲಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು ಅಕ್ರಮವಾಗಿ ಬೇಟೆಯಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ವಿವಿಧ ಜಾತಿಯ ಗಿಡ, ಮರ, ಪ್ರಾಣಿ- ಪಕ್ಷಿ ಸಂಕುಲಗಳ ಬಗ್ಗೆ ಮಾಹಿತಿ ನೀಡಿ ಇದಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಡಿಆರ್‌ಎಫ್‌ಒ ನವೀನ್ ಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಗ್ರಾಮಾಂತರ ಉಪಾಧ್ಯಕ್ಷ ವೆಂಕಟಪ್ಪ, ಗ್ರಾಮಾಂತರ ಕಾರ್ಯದರ್ಶಿ ದಾ.ರಾ.ಮಹೇಶ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಎನ್.ವಿಜಯ್, ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ರವಿಚಂದ್ರ ಬೂದಿತಿಟ್ಟು, ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಉಪಾಧ್ಯಕ್ಷ ಬಿ.ಎಂ.ಸ್ವಾಮಿ, ಕಾರ್ಯದರ್ಶಿ ಪಿ.ಎನ್.ದೇವೇಗೌಡ, ಸತೀಶ್ ಆರಾಧ್ಯ, ಪಿ.ಡಿ.ಪ್ರಸನ್ನ, ಹುಣಸೂರು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್ ಇತರರು ಇದ್ದರು.