ಬೆಂಗಳೂರು: ವಾರಾಂತ್ಯದ ದಿನವಾದ ಶನಿವಾರ ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಆಯೋಜಿಸಿದ್ದ ‘ರೈತರ ಸಂತೆ’ಯಲ್ಲಿ ಸಡಗರ ಮನೆಮಾಡಿತ್ತು. ಸಿಟಿ ಜನ ಸಂತೆ ಬಂದು ತಮಗೆ ಇಷ್ಟವಾದ ಪದಾರ್ಥಗಳನ್ನು ಖರೀದಿಸಿ ಖುಷಿಪಟ್ಟರು. ಕೈಗೆಟಕುವ ಬೆಲೆ, ತಾಜಾ ಉತ್ಪನ್ನ ಹಾಗೂ ಪರಿಸರ ಸ್ನೇಹಿ ಕೃಷಿ ವಾತಾವರಣದಲ್ಲಿ ಬೆಳೆದ ಕೃಷ್ಯೋತ್ಪನ್ನಗಳು ಬಿಸಿ ಮಸಾಲೆ ದೋಸೆ ರೀತಿ ಬಿಕರಿಯಾದವು.
ರೈತರು ಹಾಗೂ ಗ್ರಾಹಕರು ಒಂದೇ ವೇದಿಕೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯಾದ ರೈತರ ಸಂತೆ ಪರಿಕಲ್ಪನೆ ಕೃಷಿ ವಿವಿಯದ್ದು. ಮಧ್ಯವರ್ತಿಗಳ ಹಾವಳಿ ಇಲ್ಲದೆ ಪಾರದರ್ಶಕ ರೀತಿಯಲ್ಲಿ ಸಿರಿಧಾನ್ಯಗಳು, ಸಾವಯವ ಉತ್ಪನ್ನಗಳ ಜತೆಗೆ ಮನೆಗೆ ಬೇಕಾದ ಆಹಾರ ಪದಾರ್ಥಗಳು ಒಂದೇ ಜಾಗದಲ್ಲಿ ಲಭ್ಯವಾದವು. ರೈತರು ತಾವು ಬೆಳೆದ ವಿವಿಧ ಹಣ್ಣು-ತರಕಾರಿ ಹಾಗೂ ದಿನಸಿ ಪದಾರ್ಥಗಳನ್ನು ಕಡಿಮೆ ಬೆಲೆಗೆ ನಾಗರಿಕರಿಗೆ ಮಾರಾಟ ಮಾಡಿ ಸಾರ್ಥಕತೆ ಪಡೆದರು. ನಗರದ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಮಂದಿ ಈ ಸಂತೆಯಲ್ಲಿ ಖರೀದಿ ಭರಾಟೆ ನಡೆಸಿದ್ದು ವಿಶೇಷವಾಗಿತ್ತು.
ಈ ಹಿಂದೆಯೂ ರೈತರ ಸಂತೆ ಆಯೋಜಿಸಿದ್ದರೂ, ಈ ಬಾರಿ ಎರಡು ದಿನ ಆಯೋಜಿಸಲಾಗಿದೆ. ಮೊದಲ ದಿನದ ಯಶಸ್ವಿ ಜತೆಗೆ ಜನರ ಬೇಡಿಕೆಯೂ ಹೆಚ್ಚಿತ್ತು. ಮುಂದಿನ ದಿನಗಳಲ್ಲಿ 15 ದಿನಗಳಿಗೊಮ್ಮೆ ಇನ್ನಷ್ಟು ಉತ್ಪನ್ನಗಳ ಸಮೇತ ರೈತರ ಸಂತೆ ಏರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ವಿವಿಯ ಕುಲಪತಿಯವರು ಪ್ರಕಟಿಸಿದರು. ಸಂತೆಯ ಪ್ರಯುಕ್ತ ಹಲಸಿನ ಹಣ್ಣಿನ ಮೇಳ, ತರಕಾರಿಗಳ ಸೆಲ್ಫಿ ಪಾಯಿಂಟ್ ವಿಶೇಷ ಆಕರ್ಷಣೆಯಾಗಿತ್ತು.
ಮಾರುಕಟ್ಟೆ ವ್ಯವಸ್ಥೆಗೆ ಮೆಚ್ಚುಗೆ:
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, ಹವಾಮಾನ ವೈಪರಿತ್ಯ ನಿರ್ವಹಣೆ ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ರೈತರ ಸಂತೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರ ಮಾರುಕಟ್ಟೆಯಿಂದ ಹೆಚ್ಚಿನ ಆದಾಯ ಕಲ್ಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ವಿವಿ ಕಾರ್ಯಕ್ಕೆ ಶ್ಲಾಸಿದರು.
ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ರೈತರೇ ತಾವು ಬೆಳೆದ ಉತ್ಪನ್ನಗಳನ್ನು ನೇರ ಮಾರಾಟ ಮಾಡಲು ಮುಂದಾಗಬೇಕು. ಮುಂದಿನ ದಿನಗಳಲ್ಲಿ ರೈತರ ನೇರ ಮಾರುಕಟ್ಟೆಗೆ ಉತ್ತಮ ಅವಕಾಶಗಳಿದ್ದು, ಹಿಂದಿನ ದಿನಗಳಲ್ಲಿ ನಡೆಸುತ್ತಿದ್ದ ವಾರದ ಸಂತೆಗಳನ್ನು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಮತ್ತೆ ಜಾರಿಗೆ ತರುವುದು ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು.
ಒಂದೇ ಸೂರಿನಡಿ ಮಾರುಕಟ್ಟೆ ಸೌಲಭ್ಯ:
ಕೃಷಿ ವಿವಿಯ ಕುಲಪತಿ ಡಾ. ಎಸ್.ವಿ. ಸುರೇಶ್ ಮಾತನಾಡಿ, ರೈತ ಸಂತೆಯು ರೈತರು ಹಾಗೂ ನಗರವಾಸಿ ಗ್ರಾಹಕರಿಗೆ ಒಂದೇ ಸೂರಿನಡಿ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಲಿದೆ. ಜತೆಗೆ ಕೃಷಿ ವಿವಿಯ ವ್ಯಾಪ್ತಿಗೊಳಪಡುವ ವಿವಿಧ ಕೃಷಿ ಸಂಶೋಧನಾ, ವಿಸ್ತರಣೆ ಹಾಗೂ ಕೃಷಿ ಮಹಾವಿದ್ಯಾಲಯಗಳಲ್ಲಿ ಉತ್ಪಾದಿಸಲಾದ ಕೃಷಿ ಉತ್ಪನ್ನಗಳು ಹಾಗೂ ಕೃಷಿ ತಂತ್ರಜ್ಞಾನ, ತಾಂತ್ರಿಕತೆ ಪರಿಚಯಿಸಲಾಗುವುದು. ಬಿತ್ತನೆ ಬೀಜ, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನ, ಸಾವಯವ ಉತ್ಪನ್ನ, ವಿವಿಧ ಸಸ್ಯಾಭಿವೃದ್ಧಿ ಸಾಮಗ್ರಿ, ತೋಟಗಾರಿಕಾ ಬೆಳಗಳಾದ ಹಣ್ಣು-ತರಕಾರಿ, ಜೈವಿಕ ಗೊಬ್ಬರ, ಕೃಷಿ ಯಂತ್ರೋಪಕರಣ, ಅಡಿಕೆ ಉತ್ಪನ್ನಗಳು, ರೇಷ್ಮೆ ಕೃಷಿಯ ಉಪ ಉತ್ಪನ್ನಗಳು, ಅಣಬೆ ಮತ್ತು ಜೇನುಕೃಷಿ, ಪಶುಸಂಗೋಪನೆ, ರಾಸಾಯನಿಕ ಮುಕ್ತ ಬೆಲ್ಲ ಮತ್ತು ಕೃಷಿ ಪ್ರಕಟಣೆಗಳ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ರೈತ ಸಂತೆಯಲ್ಲಿ ಕಡಿಮೆ ದರದಲ್ಲಿ ತಾಜಾ ಕೃಷಿ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ತಲುಪಲು ಸಹಕಾರಿಯಾಗಿದೆ. ಕೃಷಿ ವಿವಿಯು ಇಂತಹ ಕಾರ್ಯಕ್ರಮದ ಆಚರಣೆಯಿಂದ ಸಂತೆಯ ವಾತಾವರಣ ಏರ್ಪಟ್ಟಿದೆ. ನಾಗರಿಕರು ಅದರಲ್ಲೂ ರೈತರು ಈ ಸಂತೆಯ ಪ್ರಯೋಜನ ಪಡೆಯಲಿ.
- ಡಾ. ಅಶೋಕ್ ದಳವಾಯಿ, ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ