ಜಿಲ್ಲೆ

ಸ್ವಂತ ಹಣದಲ್ಲಿ ರಸ್ತೆ ಸರಿಪಡಿಸಿಕೊಂಡ ಜನರು

ಹನೂರು: ಪಟ್ಟಣದ 7ನೇ ವಾರ್ಡಿನ ಆಂಜನೇಯ ಬಡಾವಣೆಯ ನಿವಾಸಿಗಳು ಪಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತು ಬುಧವಾರ ಸ್ವಂತ ಹಣದಿಂದಲೇ ಹದಗೆಟ್ಟಿದ್ದ ರಸ್ತೆಗೆ ಮಣ್ಣು ಹಾಕಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಿಸದ ಪರಿಣಾಮ ಜನರ ಸಂಚಾರಕ್ಕೆ ತುಂಬ ತೊಡಕಾಗಿ ಪರಿಣಮಿಸಿತ್ತು. ರಸ್ತೆ ನಿರ್ಮಿಸುವಂತೆ ಪಪಂ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಿರುವಾಗ ಕಳೆದ ಒಂದು ವಾರದಿಂದ ಆಗಾಗ್ಗೆ ಸುರಿದ ಮಳೆಯಿಂದಾಗಿ ಮಣ್ಣಿನ ರಸ್ತೆ ಕೆಸರು ಮಯವಾಗಿತ್ತು. ಗುಂಡಿಗಳಲ್ಲಿ ನೀರು ನಿಲ್ಲುವಂತಾಗಿತ್ತು. ಇದರಿಂದ ನಿವಾಸಿಗಳು ಅದರಲ್ಲೂ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಓಡಾಡಲು ತುಂಬ ತೊಂದರೆ ಅನುಭವಿಸುವಂತಾಗಿತ್ತು.

ಇದರಿಂದ ಬೇಸತ್ತ ಬಡಾವಣೆಯ ನಿವಾಸಿಗಳು ಬುಧವಾರ ಚಂದದ ರೂಪದಲ್ಲಿ ಹಣ ಸಂಗ್ರಹಿಸಿ ಟ್ರಾೃಕ್ಟರ್ ಮೂಲಕ ರಸ್ತೆಗೆ ಮಣ್ಣು ಸುರಿಸಿ ಸಮತಟ್ಟು ಮಾಡುವುದರ ಮೂಲಕ ತಾತ್ಕಾಲಿಕವಾಗಿ ಓಡಾಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಜತೆಗೆ ರಸ್ತೆ ನಿರ್ಮಿಸಲು ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.