ಸಂಸದ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್  
ಜಿಲ್ಲೆ

ದೆಹಲಿಯಲ್ಲಿ ಭಷ್ಟ ಸರ್ಕಾರ ಕಿತ್ತೊಗೆದ ಜನ: ಸಂಸದ ಯದುವೀರ್

ಮೈಸೂರು: ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆಯೇ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನಗರದ ಬಿಜೆಪಿ ಕಚೇರಿ ಬಳಿ ಶನಿವಾರ ಜಮಾಯಿಸಿದ ಕಾರ್ಯಕರ್ತರು, ಮುಖಂಡರು, ಜಯಘೋಷ ಕೂಗಿದರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಗೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಯನ್ನು ಜನ ಕೈ ಹಿಡಿದಿದ್ದಾರೆ. ನಾನು ಸಹ ಅಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ. ಎಲ್ಲ ಕಾರ್ಯಕರ್ತರಿಗೆ ಶುಭಾಶಯ ಕೋರುತ್ತೇನೆ ಎಂದರು.

ಆಪ್ ಸರ್ಕಾರ ಹಲವು ಭ್ರಷ್ಟಾಚಾರ ನಡೆಸಿ ದೆಹಲಿ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಸಂಕಷ್ಟದಲ್ಲಿದ್ದ ನಾಗರಿಕರು ಭ್ರಷ್ಟ ಸರ್ಕಾರವನ್ನು ಕಿತ್ತೆಸೆದಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ದೆಹಲಿಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ಇದರಿಂದ ನಮ್ಮ ಕಾರ್ಯಕರ್ತರಲ್ಲಿಯೂ ಉತ್ಸಾಹ ಹೆಚ್ಚಾಗಿದೆ ಎಂದರು.

ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಆಪ್ ಸರ್ಕಾರವನ್ನು ದೆಹಲಿಯ ಜನರು ತಿರಸ್ಕರಿಸಿದ್ದಾರೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರು ಕಾರಣಕರ್ತರು ಎಂದರು.

ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ ಪಕ್ಷ ಪ್ರಚಾರ ಮಾಡಿತು. ಹಾಗಾಗಿ ದೆಹಲಿಯ ಜನರು ಬಿಜೆಪಿಗೆ ಜನಾದೇಶ ನೀಡಿದ್ದಾರೆ. ದೆಹಲಿ ಚುನಾವಣೆಯ ತಂತ್ರಗಾರಿಕೆಯನ್ನೇ ಮುಂಬರುವ ಎಲ್ಲ ಚುನಾವಣೆಗೂ ಮಾಡಲಾಗುವುದು ಎಂದು ಹೇಳಿದರು.

ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದರೂ ರಾಜೀನಾಮೆ ನೀಡಲಿಲ್ಲ. ಜೈಲಿನಿಂದಲೇ ಆಡಳಿತ ನಡೆಸುತ್ತೇನೆ ಎಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ್ದವಾಗಿ ನಡೆದುಕೊಂಡರು. ಆಪ್ ಸರ್ಕಾರದ ಹಲವು ಸಚಿವರು ಹಗರಣದಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದರು. ಆಪ್ ಸರ್ಕಾರದ ವ್ಯಾಪಕ ಭ್ರಷ್ಟಾಚಾರದಿಂದ ಬೇಸತ್ತ ದೆಹಲಿಯ ಜನರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲೂ ಆರೋಪ ಹೊತ್ತಿರುವವರ ನೇತೃತ್ವದ ಸರ್ಕಾರವಿದೆ. ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿವೇಶನ ಏಕೆ ವಾಪಸ್ ನೀಡಿದರು?

ಕರ್ನಾಟಕ ರಾಜ್ಯದಲ್ಲಿರುವುದು ಮುಡಾ ಹಗರಣದಲ್ಲಿ ಮೊದಲ ಆರೋಪ ಹೊತ್ತಿರುವವರ ನೇತೃತ್ವದ ಸರ್ಕಾರವಾಗಿದೆ. ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದರೂ ಹಗರಣದಲ್ಲಿ ನಾನು ಭಾಗಿಯಾಗಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಾದರೆ ವಿವಾದಿತ 14 ನಿವೇಶನಗಳನ್ನು ಅವರ ಪತ್ನಿ ಪಾರ್ವತಿ ಅವರು, ಏಕೆ ಮುಡಾಕ್ಕೆ ವಾಪಸ್ ನೀಡಿದರು ಎಂದು ಪ್ರಶ್ನಿಸಿದರು.

ಮುಡಾ ಹಗರಣ ಸಂಬಂಧ ಮೂರು ರೀತಿಯ ತನಿಖೆ ನಡೆಯುತ್ತಿವೆ. ಈ ಹಂತದಲ್ಲಿ ಸಿಬಿಐ ತನಿಖೆಯ ಅಗತ್ಯವಿರಲಿಲ್ಲ. ಆದರೂ ದೂರುದಾರರು ಆತುರದಿಂದ ಸಿಬಿಐ ತನಿಖೆಗೆ ವಹಿಸುವಂತೆ ನ್ಯಾಯಾಲಯದ ಮೊರೆ ಹೋದರು. ದೂರುದಾರರು ಏಕೆ ಆತುರಕ್ಕೆ ಬಿದ್ದರೋ ಗೊತ್ತಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.

ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಪಕ್ಷದ ನಗರ ವಕ್ತಾರ ಎಂ.ಜಿ. ಮೋಹನ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಮುಖಂಡರಾದ ಎಚ್.ಜಿ. ಗಿರಿಧರ್, ಕೇಬಲ್ ಮಹೇಶ್, ರೇಣುಕಾ ರಾಜ್, ಶಿವಕುಮಾರ್, ಜೋಗಿ ಮಂಜು, ಕಿರಣ್‌ಗೌಡ, ಪುನೀತ್ ಇತರರು ಇದ್ದರು.