ಲಕ್ಷ್ಮೇಶ್ವರ: ಮಳೆಯ ನಡುವೆಯೂ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಮತ್ತು ಪುರುಷರು ಸೇವಾ ಕೇಂದ್ರಕ್ಕೆ ಮುಗಿಬಿದ್ದ ದೃಶ್ಯ ಸೋಮವಾರ ಕಂಡು ಬಂದಿತು.
ಶನಿವಾರ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಭಾನುವಾರ ರಜಾ ದಿನವಾದ್ದರಿಂದ ಸೋಮವಾರ ನಸುಕಿನಲ್ಲಿಯೇ ಸೇವಾ ಕೇಂದ್ರದ ಮುಂದೆ ಜನ ಸರದಿಯಲ್ಲಿ ನಿಂತಿದ್ದರು.
ಪಟ್ಟಣದಲ್ಲಿ 5 ಕಡೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂ ಮತ್ತು ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಆಗಾಗ್ಗೆ ಸರ್ವರ್ ಸಮಸ್ಯೆ ತಪ್ಪದಂತಾಗಿದೆ. ಅಲ್ಲದೆ, ಪಡಿತರ ಕಾರ್ಡ್‌ನಲ್ಲಿರುವ ಕುಟುಂಬದ ಮುಖ್ಯಸ್ಥೆಯರ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಪೋನ್ ನಂಬರ್ ಲಿಂಕ್ ಮಾಡಿಸದಿರುವ ಫಲಾನುಭವಿಗಳು ಆಧಾರ್ ಕೇಂದ್ರಕ್ಕೆ ಅಲೆಯುತ್ತಿದ್ದಾರೆ. ಆದರೆ ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರಗಳ ಕೊರತೆಯಿಂದ ಜನ ಪರದಾಡುವುದು ತಪ್ಪುತ್ತಿಲ್ಲ.
ಪಟ್ಟಣದಲ್ಲಿ ಪುರಸಭೆ, ತಾಲೂಕು ಪಂಚಾಯಿತಿ ಮತ್ತು ಎಪಿಎಂಸಿ ಕಟ್ಟಡದಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಆದರೆ ಅಲ್ಲಿ ತಾಂತ್ರಿಕ ತೊಂದರೆ, ಸರ್ವರ್ ಸಮಸ್ಯೆ ತಪ್ಪುತ್ತಿಲ್ಲ. ಆದರೆ, 2 ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ಅರ್ಜಿಗಳ ಸ್ವೀಕೃತಿ ಕಾರ್ಯ ಸರಳವಾಗಿ ನಡೆಯುತ್ತಿದೆ. ಇಲ್ಲಿ ಉಚಿತವಾಗಿ ಅರ್ಜಿ ಹಾಕಲಾಗುತ್ತಿಲ್ಲ. ಆದ್ದರಿಂದ ಉಚಿತ ಅರ್ಜಿ ಸ್ವೀಕರಿಸುವ ಕೇಂದ್ರಗಳಲ್ಲಿನ ತಾಂತ್ರಿಕ ತೊಂದರೆ ಮತ್ತು ಸರ್ವರ್ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.