ಕುಶಾಲನಗರ: ಜನಪದ ನಿಂತ ನೀರಲ್ಲ, ಶಾಲೆಯ ಮೆಟ್ಟಿಲು ಹತ್ತದಿದ್ದರೂ ಜೀವನದ ಪಾಠಶಾಲೆಯಲ್ಲಿ ಎಲ್ಲಾ ರೀತಿಯ ಜ್ಞಾನ ಪಡೆದವರು ಜನಪದರು ಎಂದು ಜಾನಪದ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕರ್ನಾಟಕ ಜನಪದ ಪರಿಷತ್ ಕುಶಾಲನಗರ ತಾಲೂಕು ಘಟಕ ಹಾಗೂ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಂಗಳವಾರ ಕುಶಾಲನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ವಿದ್ಯಾರ್ಥಿಗಳತ್ತ ಜಾನಪದ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದೊಂದಿಗೆ ಜ್ಞಾನ ವೃದ್ಧಿಸುವ ಇತರೆ ಪುಸ್ತಕಗಳನ್ನು ಕೂಡ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ. ಜನಪದ ಸಾಹಿತ್ಯದಲ್ಲಿ ಅಡಕಗೊಂಡಿರುವ ನೀತಿಯ ತಿರುಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಕುಶಾಲನಗರ ತಾಲೂಕು ಜಾನಪದ ಪರಿಷತ್ ಘಟಕದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಯುವ ಪೀಳಿಗೆಗೆ ಜಾನಪದ ಸಂಸ್ಕೃತಿ, ಸೊಗಡನ್ನು ಪರಿಚಯಿಸುವ ಕಾರ್ಯವನ್ನು ಪರಿಷತ್ ಮೂಲಕ ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಉಪನ್ಯಾಸಕ ನಂಜುಂಡಸ್ವಾಮಿ ಮಾತನಾಡಿದರು. ಪದವಿಪೂರ್ವ ಕಾಲೇಜು ಉಪನ್ಯಾಸಕ ಫಿಲಿಪ್ ವಾಸ್ ಅಧ್ಯಕ್ಷತೆ ವಹಿಸಿದ್ದರು.
ಜನಪದ ಪರಿಷತ್‌ಗೆ ಸದಸ್ಯತ್ವ ನೋಂದಣಿ ಕಾರ್ಯ ನಡೆಸಲಾಯಿತು ನಂಜುಂಡಸ್ವಾಮಿ ಹಾಗೂ ನಂದೀಶ್ ಜಾನಪದ ಗೀತೆ ಹಾಡಿದರು.
ಹಾ.ತಿ.ಜಯಪ್ರಕಾಶ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜು ರೈ, ವನಿತಾ ಚಂದ್ರ ಮೋಹನ್, ವಿನೋದ್, ಜಯಪ್ರಕಾಶ್, ಶಿವರಾಜ್, ಪರಿಷತ್ ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಉಪನ್ಯಾಸಕರು ಇದ್ದರು.